ಬೆಂಗಳೂರು: ರಾಜ್ಯದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ 689 ಕೋಟಿ ರೂ. ಎಸ್ಡಿಆರ್ಎಫ್ ನಿಧಿ(ರಾಜ್ಯ ವಿಪತ್ತು ನಿರ್ವಹಣಾ ನಿಧಿ) ಲಭ್ಯವಿದೆ. ಹೆಚ್ಚುವರಿ ಅಗತ್ಯವಿದ್ದಲ್ಲಿ ಕೂಡಲೇ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಸೂಚಿಸಿದ್ದಾರೆ.
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಮತ್ತು ಈ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೃಷ್ಣಾದಲ್ಲಿ ನಿನ್ನೆ(ಭಾನುವಾರ) ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಸಿಎಂ, ಕೃಷಿ ಇಲಾಖೆಯವರು ಕಂದಾಯ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಕೂಡಲೇ ಪ್ರಾರಂಭಿಸಿ, ತ್ವರಿತವಾಗಿ ನಷ್ಟದ ವಿವರವನ್ನು ಪರಿಹಾರ ಆ್ಯಪ್ನಲ್ಲಿ ದಾಖಲಿಸಲು ಪ್ರಾರಂಭಿಸಬೇಕು. ಅವರಿಗೆ ಬೆಳೆನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು ಎಂದು ಸೂಚಿಸಿದರು.
ಸಭೆಯ ಇತರ ಮುಖ್ಯಾಂಶಗಳು :
- ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ವರದಿಯಾಗಿದೆ.
- ಕೃಷಿ ಇಲಾಖೆಯ ಎಲ್ಲ ಸ್ತರದ ಅಧಿಕಾರಿ ಹಾಗು ಸಿಬ್ಬಂದಿ ಮುಂದಿನ 15-20 ದಿನಗಳ ಕಾಲ ಸಂಪೂರ್ಣವಾಗಿ ಬೆಳೆ ಸಮೀಕ್ಷೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ.
- ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 3.43 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 1.5 ಲಕ್ಷ ರೈತರಿಗೆ 130 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ 79 ಸಾವಿರ ರೈತರಿಗೆ ಪರಿಹಾರ ನೀಡಲು 52 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಸಿಎಂ ಬೊಮ್ಮಾಯಿ ಸೂಚನೆ.
- ಮನೆ ಹಾನಿ ವಿವರಗಳನ್ನು ತಂತ್ರಾಂಶದಲ್ಲಿ ಛಾಯಾಚಿತ್ರಗಳೊಂದಿಗೆ ಕೂಡಲೇ ದಾಖಲಿಸಿ, ಮನೆ ಸಂಪೂರ್ಣ ಹಾನಿಯಾದವರಿಗೆ ಮೊದಲ ಕಂತಿನ ಪರಿಹಾರ ತಲಾ 1 ಲಕ್ಷ ರೂ. ನಂತೆ ಕೂಡಲೇ ವಿತರಿಸಲು ಕ್ರಮ ವಹಿಸಬೇಕು. ಆಯಾ ಜಿಲ್ಲೆಗಳ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ತಿಳಿಸಲಾಯಿತು.
- ವಿಮಾ ಕಂಪನಿಗಳು ಸಹ ಬೆಳೆ ನಷ್ಟಕ್ಕೆ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ.
- ರಸ್ತೆ ಹಾನಿ ವರದಿ ಪಡೆದು, ಮಳೆ ಕಡಿಮೆಯಾದ ಕೂಡಲೇ ದುರಸ್ತಿಗೊಳಿಸುವಂತೆ ತಿಳಿಸಲಾಯಿತು. ಸಂಚಾರ ಸಂಪರ್ಕ ಕಡಿತಗೊಂಡ ಸ್ಥಳಗಳನ್ನು ಆದ್ಯತೆ ಮೇರೆಗೆ ಸರಿಪಡಿಸುವಂತೆ ಸೂಚಿಸಿದರು.
- ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ 500 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿಗಳು ಆದೇಶಿಸಿದರು.
- ಗ್ರಾಮೀಣ ರಸ್ತೆಗಳ ಹಾನಿಯ ಕುರಿತು ತಾಲೂಕುವಾರು ವಿವರ ನೀಡುವಂತೆ ಸೂಚನೆ.
- 4 ಕೆರೆಗಳು ಸಂಪೂರ್ಣ ಹಾನಿಯಾಗಿದೆ. ಕೆರೆಗಳ ದುರಸ್ತಿಯನ್ನು ಸಮರೋಪಾದಿಯಲ್ಲಿ ಮಾಡಿ, ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಬೇಕು.
- ವಿದ್ಯುತ್ ಸರಬರಾಜು ಕಂಪನಿಗಳು ಸಹ ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು.
- ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಕ್ಕೆ ಪ್ರತಿ ವಲಯಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿಯನ್ನು ಕೂಡಲೇ ಸಲ್ಲಿಸಿ, ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಮಾರಣಾಂತಿಕ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್ ಹಾಗು ಲೈಟಿಂಗ್ ವ್ಯವಸ್ಥೆ ಮಾಡಬೇಕು. ಕೂಡಲೇ ದುರಸ್ತಿಗೆ ಕ್ರಮ ವಹಿಸಲು ಸೂಚನೆ.
- ಬೆಂಗಳೂರಿನಲ್ಲಿ ಮಳೆ ಹಾನಿ ಸಂಭವಿಸಿದ ಕುರಿತು ವಾರ್ಡ್ ವಾರು ವರದಿ ಸಲ್ಲಿಸುವಂತೆ ಸೂಚನೆ.
- ಗೃಹ ರಕ್ಷಕ ದಳ, ಪೌರ ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯ ಸೇವೆ ಪಡೆಯಲು ಸೂಚಿಸಲಾಗಿದೆ.
ನವೆಂಬರ್ ತಿಂಗಳಿನಲ್ಲಿ ಆಗಿರುವ ಅಕಾಲಿಕ ಮಳೆಯಿಂದ ಪ್ರಾಥಮಿಕ ಅಂದಾಜಿನಂತೆ ಸಂಭವಿಸಿದ ನಷ್ಟದ ವಿವರ:
- ಜೀವ ಹಾನಿ- 24
- ಮನೆ ಹಾನಿ (ಸಂಪೂರ್ಣ ಮನೆ ಹಾನಿ 658, ಭಾಗಶಃ ಹಾನಿ 8495)
- ಜಾನುವಾರು- 191
- ಬೆಳೆ ಹಾನಿ ( ಕೃಷಿ- 5 ಲಕ್ಷ ಹೆಕ್ಟೇರ್, ತೋಟಗಾರಿಕೆ- 30114 ಹೆಕ್ಟೇರ್ ಪ್ರದೇಶ)
- ರಸ್ತೆ ಹಾನಿ- 2203 ಕಿ.ಮೀ
- ಸೇತುವೆಗಳು- 165
- ಶಾಲೆಗಳು 1,225
- ಪ್ರಾಥಮಿಕ ಆರೋಗ್ಯ ಕೇಂದ್ರ –39
- ವಿದ್ಯುತ್ ಕಂಬ- 1674
- ವಿದ್ಯುತ್ ಟ್ರಾನ್ಸ್ ಫಾರ್ಮರ್- 278
ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೋಲಾರ ಸಂಸದ ಕೆ. ಮುನಿಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರಧಾನಿಗೆ ಬಹಿರಂಗ ಪತ್ರ ಬರೆದ ಸಂಯುಕ್ತ ಕಿಸಾನ್ ಮೋರ್ಚಾ.. ಬೇಡಿಕೆಗಳು ಹೀಗಿವೆ..