ಬೆಂಗಳೂರು : ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಈ ವೇಳೆ ಸಮಯದ ಪರಿಮಿತಿ ಬಿಟ್ಟು ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕೆಲಸ ಮಾಡದ ಜಿಲ್ಲಾಧಿಕಾರಿಗಳಿಗೆ ಸೂಕ್ಷ್ಮ ಎಚ್ಚರಿಕೆ ನೀಡಿದ ಸಿಎಂ, ಡಿಸಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಗಳಲ್ಲಿ ಕೆಲ ಸಮಸ್ಯೆಗಳು ಆಗ್ತಿರೋದನ್ನು ಗಮನಿಸಿದ್ದೇನೆ. ಆದರೆ, ಅದನ್ನು ಬಗೆಹರಿಸುವ ಕೆಲಸ ಮಾತ್ರ ನಿಮ್ಮಿಂದ ಸರಿಯಾಗಿ ಆಗ್ತಿಲ್ಲ. 10 ರಿಂದ 5 ಗಂಟೆ ಸರ್ಕಾರಿ ಕೆಲಸ ಅನ್ನೋದನ್ನು ಬಿಡಿ. ಸರಿಯಾಗಿ ಜನರ ಕಷ್ಟಗಳನ್ನು ಕೇಳಿ. ಜನರ, ದೀನ ದಲಿತರ, ರೈತರ ಸಮಸ್ಯೆ ವಿಳಂಬ ಬೇಡ. ಜನರ ಸಮಸ್ಯೆ ವಿಷಯದಲ್ಲಿ ರಾಜೀನೇ ಇಲ್ಲ ಎಂದರು.
ಸಭೆಯ ಪ್ರಾರಂಭದಲ್ಲೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಎಂ ಬೊಮ್ಮಾಯಿ, ಕಾಲ ಬದಲಾಗಿದೆ. ಜನ ಪ್ರಶ್ನೆ ಮಾಡ್ತಾರೆ ಅನ್ನೋದು ಮರೆಯಬೇಡಿ. ಸರ್ಕಾರದ ಕೊನೆಯ ವರ್ಷ ಇದು. ಬಜೆಟ್ ಅನುಷ್ಠಾನ ನಿಮ್ಮ ಹೆಗಲ ಮೇಲಿದೆ. ಪೆಂಡಿಂಗ್ ಕೆಲಸ ಯಾವುದು ಇಡಬೇಡಿ.
ಜಿಲ್ಲೆ ಜವಾಬ್ದಾರಿ ನಿಮ್ಮದು, ಕೆಳಹಂತದ ಅಧಿಕಾರಿಗಳು ಮಾಡಿಲ್ಲ ಅಂತಾ ಹೇಳಬೇಡಿ. ತಾಲೂಕುಗಳಿಗೆ ಹೋಗಿ, ಕಚೇರಿಯಲ್ಲಿ ಕುಳಿತುಕೊಳ್ಳಿ. ನೀವು ತಾಲೂಕುಗಳಿಗೆ ಹೋಗಲ್ಲ. ಹೀಗಾಗಿ, ಕೆಲಸ ಆಗಲ್ಲ ಎಂದು ಆಕ್ಷೇಪಿಸಿದರು.