ಬೆಂಗಳೂರು: ನಾಳೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಪಕ್ಷದ ಮೊದಲ ಸಭೆ ಇದಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಪಡಿಸಬೇಕಿರುವ ಹಿನ್ನೆಲೆಯಲ್ಲಿ ನಾಳೆ ಬಿಜೆಪಿ ಶಾಸಕಾಂಗ ಸಭೆ ವಿಧಾನಸೌಧದಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಸೋಮವಾರ ಅಧಿವೇಶನದಲ್ಲಿ ಪಕ್ಷದ ನಿಲುವು, ಬಹುಮತ ಸಾಬೀತು ಪ್ರಕ್ರಿಯೆ, ಹಣಕಾಸು ವಿಧೇಯಕ ಪಾಸ್ ಮಾಡುವ ಕುರಿತು ಚರ್ಚೆ ನಡೆಯಲಿದೆ.
ಕಲಾಪದಲ್ಲಿ ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕಿದ್ದು, ಅಲ್ಲಿ ಯಾವುದೇ ಗದ್ದಲದಂತಹ ವಾತಾವರಣ ಸೃಷ್ಟಿಗೆ ಅವಕಾಶ ನೀಡದೆ ಶಾಂತಿಯುತವಾಗಿ ನಡೆಸುಕೊಳ್ಳುವಂತೆ ಶಾಸಕರಿಗೆ ಸಲಹೆ ನೀಡಲಾಗುತ್ತದೆ. ಮೈತ್ರಿ ಸರ್ಕಾರ ವಿಶ್ವಾಸ ಮತದಲ್ಲಿ ಸೋಲು ಕಂಡ ವೇಳೆ ಬಿಜೆಪಿ ನಡೆದುಕೊಂಡ ರೀತಿಯಲ್ಲಿಯೇ ಸೋಮವಾರದ ಕಲಾಪದಲ್ಲಿಯೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತದೆ. ನಾಳಿನ ಶಾಸಕಾಂಗ ಪಕ್ಷದ ಸಭೆ ಕೇವಲ ಅಧಿವೇಶನಕ್ಕೆ ಸಂಬಂಧಪಟ್ಟ ವಿಷಯಗಳ ಚರ್ಚೆಗೆ ಸೀಮಿತವಾಗಿದ್ದು, ಸಚಿವ ಸಂಪುಟ ರಚನೆಯಂತಹ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.