ಬೆಂಗಳೂರು: ಇಂದಿರಾನಗರದ ವಾಚ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು 2 ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚುಗಳನ್ನು ಕದ್ದೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಾಜಿನಗರದ ಫ್ರೆಜರ್ ಟೌನ್ ನಿವಾಸಿ ಶಾಮೋಯಿಲ್ ಕೊಟ್ಟ ದೂರಿನ ಆಧಾರದ ಮೇರೆಗೆ ಇಂದಿರಾನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಮೋಯಿಲ್ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಜಿಮ್ಸ್ ಟೈಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ವಾಚ್ ಶೋರೂಂ ಹೊಂದಿದ್ದಾರೆ. ಜನವರಿ 4ರಂದು ಶೋರೂಂನ್ನು ಮುಚ್ಚಿ ಹೋಗಿದ್ದರು. ಮರುದಿನ ಬೆಳಗ್ಗೆ 9 ಗಂಟೆಗೆ ಶೋರೂಂನ ಕಟ್ಟಡ ಮಾಲೀಕರು ಶಾಮೋಯಿಲ್‌ಗೆ ಕರೆ ಮಾಡಿ ನಿಮ್ಮ ಶೋರೂಂ ಡೋರ್ ಒಡೆದು ಹಾಕಲಾಗಿದೆ. ಏನಾದರೂ ಕಳ್ಳತನವಾಗಿರಬಹುದು ಎಂದು ಹೇಳಿದ್ದರು.
ಕೂಡಲೇ ಮಾಲೀಕ ಶಾಮೋಯಿಲ್ ಅಂಗಡಿಗೆ ಬಂದು ಪರಿಶೀಲಿಸಿದಾಗ ಗ್ಲಾಸ್ ಡೋರ್ ಮತ್ತು ಮುಖ್ಯ ಬಾಗಿಲು ಮುರಿದಿರುವುದು ಕಂಡು ಬಂದಿತ್ತು. ತುರ್ತು ಬಾಗಿಲಿನ ಮೂಲಕ ಒಳಗೆ ಹೋಗಿ ಪರಿಶೀಲಿಸಿದಾಗ ರೆಡಿಯೋ ಬ್ರಾಂಡ್ನ 129, ಲಾನ್‌ಜಿನೆಸ್ ಕಂಪನಿಯ 29, ಒಮೆಗಾ ಸಂಸ್ಥೆಯ 13 ವಾಚ್ಗಳು ಸೇರಿ, ಒಟ್ಟು 2 ಕೋಟಿ ರೂ. ಮೌಲ್ಯದ 171 ವಾಚ್‌ಗಳನ್ನು ಕದ್ದೊಯ್ದಿರುವುದು ಗೊತ್ತಾಗಿದೆ.
ಬಳಿಕ ಮಾಲೀಕ ಶಾಮೋಯಿಲ್ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಭಾರಿ ಅಗ್ನಿ ಅವಘಡ