ಬೆಂಗಳೂರು: ನಗರದ ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲ ಹಳ್ಳಿಗಳಲ್ಲಿ ವಾಸವಿದ್ದ ಕಾರ್ಮಿಕರ ಜೋಪಡಿಗಳನ್ನು ಬಾಂಗ್ಲಾ ವಲಸಿಗರೆಂದು ಭಾವಿಸಿ ತೆರವುಗೊಳಿಸಿದ ಪ್ರಕರಣದಲ್ಲಿ ಸಂತ್ರಸ್ತರಿಗೆ ಮರು ವಸತಿ ಕಲ್ಪಿಸುವ ಯೋಜನೆಯನ್ನು ಮುಂದಿನ ಒಂದು ವಾರದಲ್ಲಿ ಅಂತಿಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ತೆರವು ಕಾರ್ಯಾಚರಣೆಯಲ್ಲಿ ಸೂರು ಕಳೆದುಕೊಂಡಿರುವ ನಿರಾಶ್ರಿತರಿಗೆ ಮರುವಸತಿ ಕಲ್ಪಿಸುವಂತೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಸರ್ಕಾರ ಅವುಗಳನ್ನು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಮುಂದಿನ ವಾರದೊಳಗೆ ಶಾಶ್ವತ ಮರುವಸತಿ ಯೋಜನೆ ರೂಪಿಸದಿದ್ದರೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಾರ್ಯಾಚರಣೆಯಲ್ಲಿ ಜೋಪಡಿ ಕಳೆದುಕೊಂಡವರಿಗೆ ಮರುವಸತಿ ಯೋಜನೆ ರೂಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಇನ್ನೂ ಯೋಜನೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದರು.
ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸರ್ಕಾರ ಪ್ರತಿಯೊಂದಕ್ಕೂ ಕೋವಿಡ್ ನೆಪ ಹೇಳುವುದು ಸರಿಯಲ್ಲ. ನಿಮ್ಮ ತಪ್ಪಿಂದಾಗಿಯೇ ಕೂಲಿ ಕಾರ್ಮಿಕರು ಸೂರು ಕಳೆದುಕೊಂಡಿದ್ದಾರೆ. ನೆಲೆ ಕಳೆದುಕೊಂಡವರಿಗೆ ಮರುವಸತಿ ಯೋಜನೆ ರೂಪಿಸುವಂತೆ ಕೋರ್ಟ್ ಕಳೆದ ಫೆಬ್ರವರಿಯಲ್ಲೇ ಹಲವು ನಿರ್ದೇಶನ ನೀಡಿದೆ. ಆಗ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರಲಿಲ್ಲ. ಹಿಂದಿನ ವಿಚಾರಣೆ ವೇಳೆ ಒಂದು ವಾರದಲ್ಲಿ ಯೋಜನೆ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದೀರಿ. ಆದರೆ, ಈವರೆಗೂ ಯೋಜನೆ ಅಂತಿಮಗೊಳಿಸಿಲ್ಲ. ಸರ್ಕಾರದ ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟುವಾಗಿ ನುಡಿಯಿತು.