ಬೆಂಗಳೂರು: ಬಂಡಿಪುರ, ನಾಗರಹೊಳೆ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಿಂದ ವನ್ಯಜೀವಿಗಳನ್ನು ಬೇಟೆಯಾಡಿ ಅವುಗಳ ಅಂಗಾಂಗಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಕಾರ್ತಿಕ್ (40), ಪ್ರಶಾಂತ್ (28) ಹಾಗೂ ಆಂಧ್ರ ಪ್ರದೇಶ ಮೂಲದ ಪ್ರಮೀಳಾ (40), ಸಾಯಿಕುಮಾರ್ (22) ಬಂಧಿತ ಆರೋಪಿಗಳು. ಬಂಧಿತರಿಂದ ವಿವಿಧ ಪ್ರಾಣಿಗಳ ಸುಮಾರು 400ಕ್ಕೂ ಹೆಚ್ಚಿನ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. 6 ಜೊತೆ ಹುಲಿಯ ಉಗುರುಗಳು, 7 ಜೊತೆ ಚಿಪ್ಪು ಹಂದಿಯ ಉಗುರುಗಳು, 3 ಜೊತೆ ಕರಡಿಯ ಉಗುರುಗಳು, 200 ಜೊತೆ ಚಿರತೆ ಉಗುರುಗಳು, ಒಂದು ನರಿಯ ಮುಖದ ಆಕೃತಿಯ ಚರ್ಮ, ಒಂದು ನರಿ ತಲೆ ಬುರುಡೆ ಸಮೇತ ಇರುವ ಚರ್ಮ, 2 ಕಾಡು ಬೆಕ್ಕಿನ ಪಂಜಗಳು, ಕೃಷ್ಣಮೃಗ ಚರ್ಮವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇಂದು ಬೆಳಗ್ಗೆ ಕತ್ರಿಗುಪ್ಪೆಯ ಬಸ್ ನಿಲ್ದಾಣ ಬಳಿ ಅನುಮಾನಾಸ್ಪಾದ ವರ್ತನೆ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಾಗ ವನ್ಯಜೀವಿಗಳ ಉಗುರು ಸೇರಿದಂತೆ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಚಿನ್ನಾಭರಣಗಳಲ್ಲಿ ಕಾಡು ಪ್ರಾಣಿಗಳ ಉಗುರುಗಳ ಬಳಕೆ ಬಗ್ಗೆ ಗೊತ್ತಾಗಿದೆ. ಎಲ್ಲಿಂದ ಇಷ್ಟು ಪ್ರಮಾಣದ ವನ್ಯಜೀವಿಗಳ ದೇಹದ ಭಾಗಗಳು ತಂದಿದ್ದರು. ಯಾರಿಗೆ ಮಾರಾಟ ಮಾಡಲು ತಂದಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.