ಬೆಂಗಳೂರು: ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಪೊಲೀಸರಿಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಪೊಲೀಸರಿಗೆ ಡೊಳ್ಳು ಹೊಟ್ಟೆ ಕರಗಿಸಲು ನೀಡಿದ್ದ ಟಾಸ್ಕ್ ಅನ್ನು ಬಹುತೇಕ ಸಿವಿಲ್ ಪೊಲೀಸರು ಪೂರ್ಣಗೊಳಿಸಿದ್ದಾರೆ.
ಸರಾಸರಿಗಿಂತ ಹೆಚ್ಚು ತೂಕ ಹೊಂದಿರುವ ಸಿವಿಲ್ ಪೊಲೀಸರಿಗೆ ಡೊಳ್ಳು ಹೊಟ್ಟೆ ಕರಗಿಸಿ ನಿಗದಿತ ಅವಧಿಯೊಳಗೆ ತೂಕ ಇಳಿಸುವಂತೆ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ತಾಕೀತು ಮಾಡಿದ್ದರು. ತೂಕ ಇಳಿಸಿಕೊಳ್ಳದಿದ್ದರೆ ಮುಂಬಡ್ತಿ ತಡೆ ಜೊತೆಗೆ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಪದಕ ಶಿಫಾರಸು ಮಾಡುವುದಿಲ್ಲ ಎಂದು ಹೇಳಿದ್ದರು. ಸದೃಢ ದೇಹ ಹೊಂದಿರದ, ನಿಗದಿಗಿಂತ ಹೆಚ್ಚು ತೂಕ ಹೊಂದಿರುವ ಸಿವಿಲ್ ಪೊಲೀಸರು ಟಾಸ್ಕ್ ಅನ್ನು ಸವಾಲಾಗಿ ಪರಿಗಣಿಸಿ ಬಹುತೇಕರು ದಿನನಿತ್ಯ ಯೋಗ, ವ್ಯಾಯಾಮ, ಜಾಗಿಂಗ್ ಸೇರಿದಂತೆ ದೈಹಿಕ ಕಸರತ್ತಿನಲ್ಲಿ ತೊಡಗಿಸಿಕೊಂಡು ಡೊಳ್ಳು ಹೊಟ್ಟೆಯನ್ನು ಕರಗಿಸಿದ್ದಾರೆ.
3,000 ದಿಂದ 750ಕ್ಕೆ ಇಳಿಕೆ:
ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ 11 ಸಾವಿರಕ್ಕಿಂತ ಹೆಚ್ಚು ಪೊಲೀಸರಿದ್ದಾರೆ. ಈ ಪೈಕಿ 3 ಸಾವಿರ ಪೊಲೀಸರು ಹೆಚ್ಚಿನ ತೂಕದ ಜೊತೆಗೆ ಡೊಳ್ಳು ಹೊಟ್ಟೆ ಬೆಳೆಸಿಕೊಂಡಿದ್ದರು. ಹೊಟ್ಟೆ ಕರಗಿಸುವಂತೆ ಕಡ್ಡಾಯ ಆದೇಶ ಹೊರಡಿಸಿದ್ದರಿಂದ 3 ಸಾವಿರ ಪೊಲೀಸರಿಗಿದ್ದ ಡೊಳ್ಳುಹೊಟ್ಟೆ ಹೊಂದಿರುವ ಸಿಬ್ಬಂದಿ ಸಂಖ್ಯೆ ಸದ್ಯಕ್ಕೆ 750ಕ್ಕೆ ಇಳಿದಿದೆ. ಇದರ ಪರಿಣಾಮ ಸಿಬ್ಬಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಕೆಲಸದಲ್ಲಿ ಲವಲವಿಕೆಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.
ಡೊಳ್ಳು ಹೊಟ್ಟೆ ಕರಗಿಸದಿದ್ದರೆ ಸಿಗದು ರಾಷ್ಟಪತಿ ಪದಕ:
ಸೇನಾ ಯೋಧರಂತೆ ಫಿಟ್ ಅಂಡ್ ಫೈನ್ ಆಗಿರುವಂತೆ ಕಳೆದ ಮೂರು ವರ್ಷಗಳ ಹಿಂದೆ ಗೃಹ ಸಚಿವಾಲಯ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಪಡೆಗಳಿಗೆ ನಿರ್ದೇಶನ ನೀಡಿತ್ತು. ರಾಷ್ಟ್ರಪತಿ ಪದಕ ಪಡೆಯಬೇಕಾದರೆ ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಕ್ಷಮತೆ ಪ್ರಮಾಣಪತ್ರ ಪ್ರತ್ಯೇಕವಾಗಿ ಸಲ್ಲಿಸಬೇಕು. ಕ್ಲೀನ್ ಇಮೇಜ್ ಜೊತೆಗೆ ಡೊಳ್ಳು ಹೊಟ್ಟೆ ಬಾರದಂತೆ ನೋಡಿಕೊಳ್ಳುವುದು ಸಿಬ್ಬಂದಿ ಜವಾಬ್ದಾರಿ. ಪೊಲೀಸ್ ಅಧಿಕಾರಿಗಳು ಉತ್ತಮ ದೃಷ್ಟಿ ಸಹಿತ ಉನ್ನತ ಮಟ್ಟದ ದೈಹಿಕ, ವೈದ್ಯಕೀಯ ಸದೃಢತೆ ಹೊಂದಿರಬೇಕು.
ಮುಖ್ಯಮಂತ್ರಿಗಳ ಪೊಲೀಸ್ ಪದಕಕ್ಕೂ ಸಾಧನೆ, ಅನುಭವದ ಜತೆಗೆ ದೈಹಿಕ ಕ್ಷಮತೆಯೂ ಮುಂದಿನ ದಿನಗಳಲ್ಲಿ ಮಾನದಂಡವಾಗಲಿದೆ. ಕೆಎಸ್ಆರ್ಪಿಯಲ್ಲಿ ಸರಾಸರಿಗಿಂತ 10 ಕೆ.ಜಿ.ಹೆಚ್ಚು ತೂಕ ಹೊಂದಿರುವ 650ಕ್ಕೂ ಹೆಚ್ಚು ಸಿಬ್ಬಂದಿ ತೂಕ ಇಳಿಸಲು ಪ್ರತಿದಿನ ಯೋಗ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಿಸಲಾಗುತ್ತಿದೆ. ಈ ವರ್ಷದೊಳಗೆ ಡೊಳ್ಳು ಹೊಂದಿದವರ ಸಂಖ್ಯೆಯನ್ನು 500ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಸದೃಢ ಆರೋಗ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಶೇ.30 ರಷ್ಟು ಉಳಿತಾಯ:
ಫಿಟ್ ಇಂಡಿಯಾ ಅಭಿಯಾನದಡಿ ಹೊಟ್ಟೆ ಕರಗಿಸಿ ತೂಕ ಇಳಿಸಿಕೊಂಡಿರುವ ಸಿಬ್ಬಂದಿಗೆ ಸಾಕಷ್ಟು ರೀತಿಯ ಅನುಕೂಲಗಳಾಗಿವೆ. ನಿರಂತರವಾಗಿ ದೈಹಿಕ ಕಸರತ್ತಿನ ಜೊತೆಗೆ ಯೋಗ, ಪ್ರಾಣಾಯಾಮದಿಂದ ಮಾನಸಿಕವಾಗಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಇದರಿಂದ ಮಧುಮೇಹ, ರಕ್ತದೊತ್ತಡ ಹೆಚ್ಚಾಗದಂತೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿಲ್ಲ. ಆರೋಗ್ಯಭಾಗ್ಯ ಯೋಜನೆಯಡಿ ಆಸ್ಪತ್ರೆಗಳಲ್ಲಿ ದಾಖಲಾಗುವ ಸಿಬ್ಬಂದಿಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ.
ಇದನ್ನೂ ಓದಿ: ಮಲಗಿರುವ ಕೃಷ್ಣನ ಎಚ್ಚರಿಸಲು ಜಾಗರಪೂಜೆ.. ಶ್ರೀಕೃಷ್ಣ ಮಠದಲ್ಲಿ ವಿಶೇಷ ಆರಾಧನೆ
2019ರಲ್ಲಿ 1,261 ಪೊಲೀಸರು ಆಸ್ಪತ್ರೆಗೆ ದಾಖಲಾದರೆ, 2020ರಲ್ಲಿ 868 ಮಂದಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಇನ್ನೂ 2019ರಲ್ಲಿ 557 ಪೊಲೀಸರ 39.27 ಲಕ್ಷ ಹಾಗೂ 2020ರಲ್ಲಿ 380 ಸಿಬ್ಬಂದಿಯ 31.17 ಲಕ್ಷ ರೂಪಾಯಿ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಒಟ್ಟಾರೆ ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿಕೊಂಡರೆ ಶೇ.30 ರಷ್ಟು ಹಣ ಉಳಿತಾಯವಾಗಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.