ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಯುಟ್ಯೂಬ್ ವಿಡಿಯೋ ಮೂಲಕ ಆತ್ಮಸ್ಥೆರ್ಯ ತುಂಬಿದ್ದಾರೆ.
ಆರು ತಿಂಗಳಿಂದ ನಿಮ್ಮೆಲ್ಲರ ಜೊತೆ ನಾನು ನೇರವಾಗಿ ಮಾತನಾಡಲು ಆಗಲಿಲ್ಲ. ಕೊರೊನಾ ವಿರುದ್ಧ ಹೋರಾಡುವಲ್ಲಿ ನೀವೆಲ್ಲರೂ ನಿರತರಾಗಿದ್ದೀರಾ. ಹೊಸ ವರ್ಷ ಮುಗಿಯುತ್ತಿದ್ದಂತೆ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಗೆ (ಎನ್ಆರ್ಸಿ) ಸಂಬಂಧಿಸಿದಂತೆ ಪರ-ವಿರೋಧ ಪ್ರತಿಭಟನೆಗಳು ನಡೆದವು. ಇದರ ಕಾವು ಮುಗಿಯುತ್ತಿದ್ದಂತೆ ಕೊರೊನಾ ಭೀತಿ ಆವರಿಸಿಕೊಂಡಿದ್ದು ಬೇಸರ ತಂದಿದೆ. ಕರ್ತವ್ಯದಲ್ಲಿದ್ದಾಗಲೇ ಪೀಣ್ಯ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ನಾಗೇಶ್ ಮೃತರಾದರು. ಜೊತೆಗೆ ಕೊರೊನಾದಿಂದ ಇತ್ತೀಚೆಗೆ ವಿವಿ ಪುರಂ ಎಎಸ್ಐ ಜೀವ ಬಿಟ್ಟಿರುವುದು ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಪೊಲೀಸರ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯಗಳು ಅಳಿಸಿ ಹಾಕಿ, ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿದ್ದೀರಿ. ವಲಸೆ ಕಾರ್ಮಿಕರ ವಿಚಾರದಲ್ಲಿ ಎಲ್ಲೂ ಗಲಾಟೆಯಾಗದಂತೆ ತಾಳ್ಮೆ ವಹಿಸಿ, ಅವರನ್ನ ಊರಿಗೆ ಕಳಿಸುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಕಂಟೈನ್ಮೆಂಟ್ ಏರಿಯಾಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಪ್ರತಿಯೋರ್ವ ಪೊಲೀಸರಿಗೂ ಕೊರೊನಾ ಟೆಸ್ಟ್ಗೆ ಒಳಗಾಗುವಂತೆ ಸೂಚನೆ ನೀಡಿದ್ದೇನೆ. ಟೆಸ್ಟ್ನಲ್ಲಿ ಪಾಸಿಟಿವ್ ಬಂದರೆ ಧೈರ್ಯವಾಗಿ ಕ್ವಾರಂಟೈನ್ಗೆ ಒಳಗಾಗಿ. ಆಯಾ ವಲಯದ ಡಿಸಿಪಿಗಳು ಹಾಗೂ ಇನ್ಸ್ಪೆಕ್ಟರ್ಗಳು ಸಿಬ್ಬಂದಿಯನ್ನ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೊರೊನಾ ವಾರಿಯರ್ಸ್ಗೆ ಆತ್ಮಸ್ಥೆರ್ಯ ತುಂಬಿರುವ ಯಟ್ಯೂಬ್ ಲಿಂಕ್ ಇಲ್ಲಿದೆ: https://youtu.be/0eXHGEVzFBE