ಬೆಂಗಳೂರು: ಪಾದರಾಯನಪುರದ ಬಳಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ 6ನೇ ಎಫ್ಐಆರ್ ದಾಖಲು ಮಾಡಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಾದರಾಯನಪುರದಲ್ಲಿ ಸದ್ಯದ ಸ್ಥಿತಿ ಕಂಟ್ರೋಲ್ಗೆ ಬರುತ್ತಿದೆ. ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ. ಸದ್ಯಕ್ಕೆ 5 ಎಫ್ಐಆರ್ ದಾಖಲಾಗಿವೆ. ಈಗ 6ನೇ ಎಫ್ಐಆರ್ ದಾಖಲು ಮಾಡಲಿದ್ದೇವೆ ಎಂದರು. ಜನರ ಆರೋಗ್ಯದ ದೃಷ್ಟಿಯಿಂದ ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಅಲ್ಲಿಗೆ ಹೋಗಿದ್ದರು. ಈ ಘಟನೆ ಬೇಸರ ತರಿಸಿದ್ದು, ಈಗಾಗಲೇ ಸೀಲ್ ಡೌನ್ ಜಾರಿ ಮಾಡಲಾಗಿದೆ. ಸದ್ಯಕ್ಕೆ ಪಾದರಾಯನಪುರದಲ್ಲಿ ನಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜನರ ಆರೋಗ್ಯದ ದೃಷ್ಟಿಯಿಂದ ಇಂದಿನಿಂದ ಮತ್ತೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದು ಮಾರ್ಚ್ 3ರವರೆಗೆ ಮುಂದುವರೆಯಲಿದೆ ಎಂದರು.
ಸದ್ಯಕ್ಕೆ ನಗರದಲ್ಲಿ 36 ಸಾವಿರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಸಿಟಿಯ ಗಲ್ಲಿ ಗಲ್ಲಿಯಲ್ಲಿ ಬ್ಯಾರಿಕೇಡ್ ಹಾಕಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪ್ರದೇಶಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.