ಬೆಂಗಳೂರು: ನಗರದಲ್ಲಿ ರಾರಾಜಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ 'ಸಿಟಿಜನ್ಸ್ ಫಾರ್ ಬೆಂಗಳೂರು' ಸಂಘಟನೆ ಸದಸ್ಯರು ಮೇಯರ್ ಗಂಗಾಂಬಿಕೆ ಅವರೊಂದಿಗೆ ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ಸಭೆ ನಡೆಸಿದರು.
ಬೆಂಗಳೂರಿನಲ್ಲಿ ಕಸದ ಸಮಸ್ಯೆಯ ಜೊತೆಗೆ ನೂರಾರು ಸಮಸ್ಯೆಗಳಿವೆ. ಅವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಸದಸ್ಯರು ಒತ್ತಾಯಿಸಿದರು. ಬಳಿಕ ಮೇಯರ್ ಗಂಗಾಂಬಿಕೆ ಮಾತನಾಡಿ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಡುವೆ ಬಾಂಧವ್ಯ ಉತ್ತಮವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ವಾರ್ಡ್ ಅನ್ನು ಪ್ರತಿನಿಧಿಸುವ ಸ್ಥಳೀಯ ಸದಸ್ಯರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಜೊತೆಗೆ ಸಾರ್ವಜನಿಕರೂ ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಆಗ ಮಾತ್ರ ವಾರ್ಡ್ ತ್ವರಿತವಾಗಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ವಾರ್ಡ್ಗಳ ಸಮಸ್ಯೆ ನಿವಾರಣೆಗೆ ಹೈಕೋರ್ಟ್ ನಿರ್ದೇಶನದಂತೆ ಪ್ರತಿ ವಾರ್ಡ್ಗೊಂದು ಕಡ್ಡಾಯವಾಗಿ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರು 3-4 ಸಭೆಗಳಿಗೆ ಹಾಜರಾಗದೇ ಹೋದರೆ ಅವರನ್ನು ಬದಲಿಸಬೇಕಾಗುತ್ತದೆ. ಈ ಕುರಿತು ಆ ಪಾಲಿಕೆ ಸದಸ್ಯ ಪಾಲಿಕೆಗೆ ಪತ್ರ ಬರೆಯಬೇಕು. ಬಳಿಕ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆ ಶೀಘ್ರ ಸುತ್ತೋಲೆ ಹೊರಡಿಸಲಾಗಿವುದು ಎಂದರು.
'ಸಿಟಿಜನ್ಸ್ ಫಾರ್ ಬೆಂಗಳೂರು' ಸಂಘಟನೆ ಹಾಗೂ ಇತರೆ ಸಂಘಟನೆಗಳು ಈ ರೀತಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಎಂದು ಕಾಲಕಾಲಕ್ಕೆ ನೆನಪಿಸುತ್ತಿವೆ. ಇದರಿಂದ ನಮಗೆ ತುಂಬಾ ಉಪಯೋಗವಾಗುತ್ತಿದೆ ಎಂದು ಹೇಳಿದರು.