ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಮನೆಯಲ್ಲಿ ಸುಮಾರು 1.55 ಕೋಟಿ ರೂಪಾಯಿ ಹಣವನ್ನು ಸಿಐಡಿ ತನಿಖಾಧಿಕಾರಿಗಳು ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ. ನೇಮಕಾತಿ ವಿಭಾಗದ ಹೆಡ್ಕಾನ್ಸ್ಟೇಬಲ್ ಆಗಿದ್ದ ಶ್ರೀಧರ್‌ಗೆ ಸೇರಿದ ಚಾಮರಾಜಪೇಟೆಯಲ್ಲಿರುವ ಮನೆಗೆ ಸಿಐಡಿ ತಂಡ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿತ್ತು.
ಈ ವೇಳೆ ಮನೆಯ ಕೋಣೆಯೊಂದರಲ್ಲಿ ಬಚ್ಚಿಟ್ಟಿದ್ದ ಬ್ಯಾಗ್‌ನಲ್ಲಿ ಕಂತೆ - ಕಂತೆ ನೋಟುಗಳು ಕಂಡು ಸಿಐಡಿ ಅಧಿಕಾರಿಗಳೇ ದಂಗಾಗಿದ್ದಾರೆ. ನೋಟು ಎಣಿಕೆ ಯಂತ್ರ ತಂದು ಪರಿಶೀಲಿಸಿದಾಗ 1.55 ಕೋಟಿ ರೂ. ನಗದು ಹಣವನ್ನು ಶ್ರೀಧರ್ ಬಚ್ಚಿಟ್ಟಿರುವುದು ಗೊತ್ತಾಗಿದೆ. ಮನೆಯಲ್ಲಿ ಪತ್ತೆಯಾದ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಐಡಿ ಜಪ್ತಿ ಮಾಡಿದೆ.
ಶ್ರೀಧರ್‌ಗೆ ಈ ಹಣ ಕೊಟ್ಟವರು ಯಾರು? ಯಾರಿಗೆ ಸೇರಿದ ಹಣ? ಎಂಬಿತ್ಯಾದಿ ವಿಚಾರಗಳ ಕುರಿತು ಸಿಐಡಿ ಅಧಿಕಾರಿಗಳು ಬಂಧನಕ್ಕೊಳಗಾಗಿರುವ ಶ್ರೀಧರ್ ಹಾಗೂ ಡಿವೈಎಸ್‌ಪಿ ಶಾಂತಕುಮಾರ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಾಂತಕುಮಾರ್ ಅಣತಿಯಂತೆ ಶ್ರೀಧರ್ ಕೆಲಸ ಮಾಡುತ್ತಿದ್ದ. ಅಭ್ಯರ್ಥಿಗಳು ಕೊಟ್ಟಿರುವ ಹಣವನ್ನು ಶಾಂತಕುಮಾರ್ ಸೂಚನೆ ಮೇರೆಗೆ ಶ್ರೀಧರ್ ತನ್ನ ಮನೆಯಲ್ಲಿಟ್ಟಿದ್ದ ಎನ್ನಲಾಗಿದೆ. ಇದು ಯಾವ ಅಭ್ಯರ್ಥಿಗಳು ಕೊಟ್ಟಿರುವ ಹಣ? ಎಂಬ ಬಗ್ಗೆ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಇದನ್ನೂ ಓದಿ: ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ