ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿಗಳ ವಿಚಾರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಸಹ 50 ಅಭ್ಯರ್ಥಿಗಳು ಸಿಐಡಿ ವಿಚಾರಣೆ ಎದುರಿಸಿದ್ದು ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ವಿವರಣೆ ನೀಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಗೆ ನುಂಗಲೂ ಆಗದ ಉಗುಳಲೂ ಆಗದಂತೆ ಪರಿಣಮಿಸಿರುವ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಸಿಐಡಿಯಿಂದ ಚುರುಕುಗೊಂಡಿದೆ.
2020-21ನೇ ಸಾಲಿನ 545 ಅಭ್ಯರ್ಥಿಗಳ ವಿಚಾರಣೆ ಆರಂಭಿಸಿರುವ ಸಿಐಡಿ ಇಂದೂ ಸಹ 50 ಅಭ್ಯರ್ಥಿಗಳಿಂದ ವಿವರಣೆ ಪಡೆದುಕೊಂಡಿದೆ. ನಿನ್ನೆ 49 ಅಭ್ಯರ್ಥಿಗಳ ವಿಚಾರಣೆ ನಡೆಸಿದ್ದ ತನಿಖಾಧಿಕಾರಿ ನರಸಿಂಹಮೂರ್ತಿ ನೇತೃತ್ವದ ತಂಡ ಇಂದೂ ಸಹ ಮೊದಲ ಹಂತದಲ್ಲಿ 10 ಅಭ್ಯರ್ಥಿಗಳನ್ನ ವಿಚಾರಣೆ ನಡೆಸಿದೆ.
ಪ್ರತ್ಯೇಕ 4 ತಂಡಗಳಾಗಿ ವಿಚಾರಣೆ ನಡೆಸುತ್ತಿರುವ ಸಿಐಡಿ ಪೊಲೀಸರು ಅಭ್ಯರ್ಥಿಗಳ ಬಳಿಯಿರುವ ಪ್ರವೇಶ ಪತ್ರ, ಓಎಂಆರ್ ಶೀಟ್‌ನೊಂದಿಗೆ ಅಸಲಿ ಉತ್ತರ ಪತ್ರಿಕೆಗಳನ್ನು ತಾಳೆ ಹಾಕಿ ನೋಡುತ್ತಿದ್ದು, ಜೊತೆಯಲ್ಲೇ ಪ್ರತಿ ಅಭ್ಯರ್ಥಿಯ ಕೌಟುಂಬಿಕ ಹಿನ್ನೆಲೆ, ಆದಾಯದ ಮೂಲ, ಪರೀಕ್ಷೆ ಎದುರಿಸಲು ತರಬೇತಿ ಪಡೆದಿರುವುದರ ಕುರಿತು ವಿವರಣೆ ಪಡೆದುಕೊಂಡಿದೆ.
ಮತ್ತೊಂದೆಡೆ ಅಕ್ರಮ ನೇಮಕಾತಿ ಮೂಲಕ ಅಫ್ಜಲ್ಪುರ ಶಾಸಕ ವೈ.ಪಾಟೀಲ್ ಅವರ ಗನ್ಮ್ಯಾನ್ ಆಗಿ ಸೇವೆ ಆರಂಭಿಸಿದ್ದ ಐಯಣ್ಣ ದೇಸಾಯಿ ಎಂಬಾತನನ್ನು ಸಿಐಡಿ ತಂಡ ಬಂಧಿಸಿದ್ದು ಜೊತೆಗೆ ಹಣದ ಮೂಲಕ ಹುದ್ದೆಗೇರಲು ಪ್ರಯತ್ನಿಸಿದ್ದ ಸಿಎಆರ್ ಕಾನ್ಸ್ಟೆಬಲ್ ರುದ್ರೇಗೌಡನನ್ನು ಸಹ ಬಂಧಿಸಲಾಗಿದೆ. ಪರೀಕ್ಷಾ ಅಕ್ರಮದ ವಾಸನೆ ಈ ಹಿಂದೆ ಆಯ್ಕೆಗೊಂಡ 545 ಅಭ್ಯರ್ಥಿಗಳಿಗೂ ತಲೆನೋವು ತಂದೊಡ್ಡಿದ್ದು, ಸಿಐಡಿಯಿಂದ ಹಂತ ಹಂತವಾಗಿ ವಿಚಾರಣೆ ನಡೆಯುತ್ತಿದೆ.
ಈ ಹಿಂದೆ ಅಭ್ಯರ್ಥಿಗಳ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಪಡೆದಿರುವ ಸಿಐಡಿ ಟೀಂ ವ್ಯವಸ್ಥಿತ ಜಾಲ ಬೇಧಿಸಿ ಇಲಾಖೆಗಂಟಿರುವ ಕಳಂಕ ಕಿತ್ತೆಸೆಯಲು ಶತಪ್ರಯತ್ನ ನಡೆಸುತ್ತಿದೆ. ಪ್ರಕರಣ ಸಂಬಂಧ ನೇಮಕಾತಿ ಪಟ್ಟಿಯಲ್ಲಿದ್ದ ಎಲ್ಲ ಅಭ್ಯರ್ಥಿಗಳಿಗೂ ನೋಟಿಸ್ ನೀಡಲಾಗಿದೆ. ಈಗಾಗಲೇ 100 ಅಭ್ಯರ್ಥಿಗಳ ವಿಚಾರಣೆ ನಡೆಸಿರುವ ಸಿಐಡಿ ಉಳಿದ ಆಭ್ಯರ್ಥಿಗಳಿಗೂ ಹಾಲ್ ಟಿಕೆಟ್ ಹಾಗೂ ಒಎಂಆರ್ ಪ್ರತಿ ಜೊತೆ ಹಾಜರಾಗಲೂ 25 ರಿಂದ 29ನೇ ತಾರೀಖು ನಿಗದಿತ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕು.. 50 ಅಭ್ಯರ್ಥಿಗಳ ವಿಚಾರಣೆ