ಬೆಂಗಳೂರು: ಭಾನುವಾರ ಬೆಂಗಳೂರಿನ ಹುಳಿಮಾವು ಕೆರೆಯ ಕಟ್ಟೆ ಒಡೆದು ಉಂಟಾದ ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವ ಜನರ ನೆರವಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳು ಧಾವಿಸಿದ್ದು, ಅಗತ್ಯ ಗೃಹ ಬಳಕೆ ವಸ್ತುಗಳ ಜೊತೆ ದವಸ ಧಾನ್ಯಗಳನ್ನ ತಮ್ಮ ಸ್ವಂತ ದುಡ್ಡಿನಿಂದ ತಂದು ಹಂಚಿದ್ದಾರೆ.
ನಮ್ಮ ಕಾಲೇಜು ಇರುವ ಏರಿಯಾದಲ್ಲಿ ಹೀಗಾಗಿದೆ ಎಂದು ನಾವು ಟಿವಿಯಲ್ಲಿ ಸುದ್ದಿ ನೋಡಿದಾಗ ತುಂಬಾ ಬೇಸರವಾಯಿತು. ನಂತರ ಒಂದು ನಿರ್ಧಾರಕ್ಕೆ ಬಂದು,ಕಾಲೇಜಿನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ದೇಣಿಗೆ ಪಡೆದು ಜನರಿಗೆ ಅಗತ್ಯವಿರುವ ಅಡುಗೆ ಪದಾರ್ಥಗಳನ್ನ ತಂದಿದ್ದೇವೆ. ನಾಳೆಯೂ ತರಗತಿಗಳು ಮುಗಿದ ನಂತರ ಇಲ್ಲಿನ ಮಕ್ಕಳಿಗೆ ಬೇಕಾದಂತಹ ಪುಸ್ತಕಗಳನ್ನು ತರುವ ಯೋಜನೆಯನ್ನು ಹೊಂದಿದ್ದೇವೆ ಎಂದರು.
ಸದ್ಯ 150 ಮನೆಗಳಿಗೆ ಆಹಾರ ಧಾನ್ಯ ಪದಾರ್ಥಗಳನ್ನ ಕಾಲೇಜಿನಲ್ಲಿ ಸಂಗ್ರಹಿಸಿದ 35,000 ರೂಗಳಿಂದ ತಂದಿದ್ದು, ಸ್ವತಃ ನಾವೇ ಪ್ರತಿಯೊಂದು ಮನೆಗೆ ನಮ್ಮ ಪ್ರಾಧ್ಯಾಪಕರ ಜೊತೆಗೂಡಿ ಹಂಚಿದ್ದೇವೆ. ಈ ರೀತಿ ದುರ್ಘಟನೆ ಸಂಭವಿಸಿದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಬೆಂಗಳೂರನ್ನ ಕೆರೆಗಳ ನಗರಿ ಎಂದು ಕರೆಯಲಾಗುತ್ತಿತ್ತು. ಆದರೆ,ಈಗ ಅಳಿದುಳಿದಿರುವ ಕೆರೆಗಳನ್ನ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಯಾವುದೇ ಕೆರೆಗಳಲ್ಲಿ ಈ ರೀತಿಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದರು.