ಬೆಂಗಳೂರು : ಚೀಟಿ ಹೆಸರಿನಲ್ಲಿ ನಗರದಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಲ ಸೋಲ ಮಾಡಿ ಚೀಟಿ ಕಟ್ಟಿದರೆ ವಂಚಕರು ಮಾತ್ರ ಹಣ ಕಟ್ಟಿಸಿಕೊಂಡು ವಂಚಿಸುವ ದಾರಿ ಕರಗತ ಮಾಡಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಪ್ಪನ ಅಗ್ರಹಾರದ ನಿವಾಸಿಗಳಾದ ಅನಿಲ್ ರೆಡ್ಡಿ ಹಾಗೂ ಸುನೀಲ್ ರೆಡ್ಡಿ ಎಂಬ ಅಣ್ಣ-ತಮ್ಮರ ವಿರುದ್ಧ 60ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ದೂರು ನೀಡಲು ಹೋದರೆ ಇನ್‌ಸ್ಪೆಕ್ಟರ್ ಸಂದೀಪ್ ರೆಡ್ಡಿ ಕೂಡ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಡಿಸಿಪಿಗೆ ದೂರುದಾರರು ದೂರು ನೀಡಿದ್ದಾರೆ. ರೆಡ್ಡಿ ಸಹೋದರರು ಕಳೆದ 15 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಾ ಬಂದಿದ್ದಾರೆ.
ನಫೀಜ್ ಎಂಬುವರು 2018ರಿಂದ ರೆಡ್ಡಿ ಬ್ರದರ್ಸ್ ಜತೆಗೆ ಚೀಟಿ ವ್ಯವಹಾರ ನಡೆಸುತ್ತಿದ್ದರು. ತಿಂಗಳಿಗೆ 50 ಸಾವಿರ ರೂ. ಚೀಟಿ ಕಟ್ಟುತ್ತಿದ್ದರು. ಚೀಟಿ ಮುಗಿದರೂ ಹಣ ನೀಡದೆ ವಿಳಂಬ ಮಾಡುತ್ತಿದ್ದರು.
2020ರಲ್ಲಿ ಕೊರೊನಾ ಬಿಕ್ಕಟ್ಟು ಹಿನ್ನೆಲೆ ಹಣ ಪಾವತಿಸಲು ಚೀಟಿದಾರರಿಗೆ ಹಣ ನೀಡುವುದಾಗಿ ಭರವಸೆ ನೀಡಿದರೂ ಈವರೆಗೂ ಹಣ ನೀಡಿಲ್ಲ. 14 ಲಕ್ಷ ರೂ. ಚೀಟಿ ಹಣ ಕೊಡಬೇಕಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ವಂಚನೆಗೊಳಗಾದ ಹಫೀಜ್ ಆರೋಪಿಸಿದ್ದಾರೆ.
ಸುಮಾರು 60 ಜನರಿಗೆ 13 ಕೋಟಿ ರೂಪಾಯಿ ಹಣ ಕೊಡದೆ ವಂಚಿಸಿರುವುದು ಗೊತ್ತಾಗಿದೆ. ವಂಚಕರ ವಿರುದ್ದ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.