ಬೆಂಗಳೂರು: ಸರ್ಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ಅವರನ್ನು ಬಾಲ ನ್ಯಾಯ ಮಂಡಳಿ ನೇಮಕ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿದ ಪ್ರಕರಣಕ್ಕೆ ಕುರಿತಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಜಿಲ್ಲೆಗಳಲ್ಲಿನ ಬಾಲನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಕರ್ನಾಟಕ ರಾಜ್ಯ ಆಯ್ಕೆ ಸಮಿತಿಯ ಸದಸ್ಯರ ಸ್ಥಾನಕ್ಕೆ ಸರ್ಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ನೇಮಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಅರ್ಜಿದಾರರಾದ ವಕೀಲೆ ಸುಧಾ ಕಾಟ್ವ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ನಡೆಯಿತು. ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ವಾದ ಮಂಡಿಸಿ, ಕರ್ನಾಟಕ ರಾಜ್ಯ ಆಯ್ಕೆ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ. ಬಡಸ್ಕರ್ ಅವರ ಹೆಸರು ಅಂತಿಮ ಆಯ್ಕೆಪಟ್ಟಿಯಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಆದರೂ ಅವರನ್ನು ನೇಮಿಸಲಾಗಿದೆ. ಈ ಕ್ರಮ ಕಾನೂನು ಬಾಹಿರವಾಗಿದ್ದು, ಈ ಇಬ್ಬರಿಗೂ ಮಕ್ಕಳ ಅಭಿವೃದ್ಧಿ ಮತ್ತು ಆರೈಕೆ ವಿಚಾರದಲ್ಲಿ ಯಾವುದೇ ಪರಿಣಿತಿ ಹಾಗೂ ಅನುಭವ ಇಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವಾದ ಆಲಿಸಿದ ಬಳಿಕ ನ್ಯಾಯಾಲಯ, ಆಯ್ಕೆ ಸಮಿತಿಯ ಸದಸ್ಯರ ಸ್ಥಾನಕ್ಕೆ ನೇಮಕವಾಗಲು ಈ ಇಬ್ಬರು ಅರ್ಹರಾಗಿದ್ದಾರೆಯೇ? ಎಂಬುದಕ್ಕಿಂತ ಮೊದಲು ಆಯ್ಕೆಪಟ್ಟಿಯಲ್ಲಿ ಹೆಸರು ಇಲ್ಲದವರು, ಹೇಗೆ ನೇಮಕಗೊಂಡರು? ಆಯ್ಕೆ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ ಈ ಇಬ್ಬರ ನೇಮಕಾತಿಗೆ ಸಂಬಂಧಿಸಿದ ಕಡತ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಕರ್ನಾಟಕ ರಾಜ್ಯ ಆಯ್ಕೆ ಸಮಿತಿಯ ಸದಸ್ಯ ಸ್ಥಾನಕ್ಕೆ ಸರ್ಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಬಾಲ ನ್ಯಾಯ ಕಾಯ್ದೆ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ಅಧಿನಿಯಮಗಳು-2016ರ ನಿಯಮ 87(1)(3)ಕ್ಕೆ ವಿರುದ್ಧವಾಗಿದೆ. ಹಾಗಾಗಿ ಅವರ ನೇಮಕಾತಿ ಆದೇಶ ರದ್ದುಪಡಿಸಬೇಕು ಹಾಗೂ ಆಯ್ಕೆ ಸಮಿತಿಗೆ ಅರ್ಹರನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.