ಬೆಂಗಳೂರು: ಪಕ್ಷದಲ್ಲಿದ್ದ ಅಸಮಾಧಾನದ ಹೊಗೆ ಆರಿಸಿ ಸಚಿವ ಸಂಪುಟ ವಿಸ್ತರಿಸಿ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗ ಬಜೆಟ್ ಮಂಡನೆ ಸವಾಲು ಎದುರಾಗಿದೆ.
ಬಿಜೆಪಿ ಸರ್ಕಾರದ ನೂತನ ಬಜೆಟ್ ಇದಾಗಿದೆ. ಮಾರ್ಚ್ 5ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಯಡಿಯೂರಪ್ಪ, ತಮ್ಮ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ತೆರಿಗೆ ಸಂಗ್ರಹದ ಕುರಿತು ಹೆಚ್ಚಿನ ಗಮನಹರಿಸಿರುವ ಬಿಎಸ್ವೈ, ಅಯವ್ಯಯದ ಸಿದ್ಧತೆಗಾಗಿ ತೆರಿಗೆ ಸಂಗ್ರಹ ಪ್ರಗತಿ ಪರಿಶೀಲನೆ ನಡೆಸಲಾಗಿದೆ.
ರಾಜ್ಯದಲ್ಲಿ ಈ ವರ್ಷ 1.17 ಲಕ್ಷ ಕೋಟಿ ರೂ. ತೆರಿಗೆ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕಳೆದ ಜೂನ್ 26ರಂದು ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವೇಳೆ ತಾತ್ಕಾಲಿಕ ಹಣಕಾಸು ವಿಧೇಯಕಕ್ಕೆ ಸದನ ಅನುಮತಿ ನೀಡಿತ್ತು. ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಅನಿವಾರ್ಯತೆ ಇದ್ದು, ಇದಕ್ಕೆ ಅವಶ್ಯಕವಾದ ಎಲ್ಲ ಸಿದ್ಧತೆಗಳನ್ನೂ ಯಡಿಯೂರಪ್ಪ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಸಚಿವರು, ಇಲಾಖಾ ಅಧಿಕಾರಿಗಳು, ತೆರಿಗೆ ಹಾಗೂ ವಾಣಿಜ್ಯ ಇಲಾಖೆ ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿದ್ದಾರೆ. ತೆರಿಗೆ ಸೋರಿಕೆಯನ್ನು ತಡೆಗಟ್ಟಿ ನಿರೀಕ್ಷಿತ ಗುರಿಗಿಂತ ಅಧಿಕ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ವಾಣಿಜ್ಯ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ತೆರಿಗೆ ಸಂಗ್ರಹ ಪ್ರಗತಿ ಪರಿಶೀಲಿಸಿದ ಅವರು, ಇದುವರೆಗೂ ನಿರೀಕ್ಷಿತ ಗುರಿ ಪೈಕಿ ಎಷ್ಟರ ಮಟ್ಟಿಗೆ ಸಾಧನೆ ಮಾಡಲಾಗಿದೆ. ಉಳಿಕೆ ಅವಧಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಅನುಸರಿಸಲಾಗುತ್ತಿರುವ ಕ್ರಮಗಳೇನು ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸಚಿವ ಸಂಪುಟ ರಚನೆ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಬಜೆಟ್ ಮಂಡನೆಗೆ ಹೆಚ್ಚು ಆದ್ಯತೆ ನೀಡುವರೆಂದು ಮೂಲಗಳು ತಿಳಿಸಿವೆ.
ತಮ್ಮ ನಾಲ್ಕು ದಶಕಗಳ ರಾಜಕೀಯ ವೃತ್ತಿಯಲ್ಲಿ ಪ್ರಬಲ ಲಿಂಗಾಯತ ಮುಖಂಡ ಯಡಿಯೂರಪ್ಪ ಅವರು ರೈತರ ಬೆನ್ನೆಲುಬಾಗಿ ನಿಂತು ಹೋರಾಟ ನಡೆಸಿಕೊಂಡು ಬಂದವರು. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಿದ್ದರು. ಆಗ ಬಿಜೆಪಿ ರೈತ ಪರವಾಗಿದೆ ಎಂದು ತೋರಿಸಿಕೊಟ್ಟಿದ್ದರು.
ಅದೇ ರೀತಿ ಈ ಬಾರಿ ಕೂಡ ರೈತಪರ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂದೂ ಸಹ ಬಿ.ಎಸ್.ಯಡಿಯೂರಪ್ಪ ಅವರು, ಅರಣ್ಯ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಅಯವ್ಯಯ ಪೂರ್ವಭಾವಿ ಸಭೆ ನಡೆಸಿದರು. ಅರಣ್ಯ ಸಚಿವ ಆನಂದ್ ಸಿಂಗ್, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.