ಬೆಂಗಳೂರು: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಈ ಬಾರಿ ಚೆನ್ನೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಆದರ್ಶ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಚೆನ್ನೇನಹಳ್ಳಿ ರೈತರ ಅಭ್ಯುದಯಕ್ಕೆ ಮುಂದಾಗಿದ್ದು, ಕುಡಿಯುವ ನೀರಿನ ಘಟಕ ಸ್ಥಾಪನೆ ಜೊತೆಗೆ ಹಲವು ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಹಸಿರು ಗ್ರಾಮ ಮಾಡಲು ಇಫ್ಕೋ ಸಂಸ್ಥೆ ಕೈಜೋಡಿಸಿದ್ದು, 1 ಕೋಟಿ ರೂ ದೇಣಿಗೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಿಂದಿನ ಅವಧಿಯ ನನ್ನ ಎರಡೂ ಆದರ್ಶ ಗ್ರಾಮಗಳೂ ಅದ್ಭುತವಾಗಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಮಾಣ ಪತ್ರಗಳೂ ಲಭಿಸಿವೆ. ಅಭಿವೃದ್ಧಿ ಬಳಿಕ ಅವುಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ನಮ್ಮ ಬೆಂಬಲವೂ ಇರುತ್ತದೆ ಎಂದರು.