ಬೆಂಗಳೂರು: ವಂಚನೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದ ಪರಿಣಾಮ ಮಾರತ್ಹಳ್ಳಿ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ಘಟನೆಯ ಹಿನ್ನೆಲೆ: ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಯಿಂದ ಎರಡು ಕೋಟಿ ರೂಪಾಯಿ ಪಡೆದಿದ್ದ 4 ಆರೋಪಿಗಳು ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಇವರಿಂದ ಮೋಸ ಹೋದ ಉದ್ಯಮಿ ಈ ಸಂಬಂಧ ಮಾರತ್ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿಗಳು ತಮಿಳುನಾಡಿನಲ್ಲಿ ಪತ್ತೆಯಾಗುತ್ತಿದ್ದಂತೆ ಅಲ್ಲಿಗೆ ಹೋಗಿ ಬಂಧಿಸಿ ನಗರಕ್ಕೆ ಕರೆ ತಂದಿದ್ದರು.
11 ಪೊಲೀಸರಿಗೆ ಕ್ವಾರಂಟೈನ್: ಇದೀಗ ನಾಲ್ವರು ಆರೋಪಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಓರ್ವನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಪರಿಣಾಮ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಆರೋಪಿಗಳಿಂದ ಪೊಲೀಸರ ಮೇಲೆ ಆರೋಪ: ತಮಿಳುನಾಡಿನಿಂದ ನಗರಕ್ಕೆ ಕರೆ ತರುವಾಗ ಅರೆಸ್ಟ್ ಮಾಡಿರುವುದನ್ನು ಹೇಳಬಾರದೆಂದರೆ 35 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿರುವುದಾಗಿ ಆರೋಪಿಗಳು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆರೋಪ ಬರುತ್ತಿದ್ದಂತೆ ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.