ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗಿದೆ. ಈದ್ಗಾ ಮೈದಾನ, ಆಟದ ಮೈದಾನ ಎಂದು ಕರೆಯುವ ಮೈದಾನ ಬಿಬಿಎಂಪಿಯದ್ದೋ ವಕ್ಫ್ ಮಂಡಳಿಯದ್ದೋ ಎಂಬ ವಿವಾದ ಭುಗಿಲೆದ್ದಿದೆ. ಇದೀಗ ಈದ್ಗಾ ಮೈದಾನಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೈದಾನದಲ್ಲಿ ಯೋಗ ದಿನಾಚರಣೆಗೆ ಹಿಂದೂ ಸಂಘಟನಗಳು ಮನವಿ ಮಾಡಿದ್ದವು. ಬಿಬಿಎಂಪಿ ಈ ಮನವಿ ತಿರಸ್ಕರಿಸಿತ್ತು. ವಕ್ಫ್ ಮಂಡಳಿ ಮೈದಾನ ತನಗೆ ಸೇರಿದ್ದು ಎಂದು ದಾಖಲೆಗಳನ್ನು ನೀಡಿದೆ. ದಾಖಲೆಯನ್ನು ಪರಿಶೀಲನೆ ನಡೆಸಲು ಕೆಲವು ದಿನ ಸಮಯಾವಕಾಶ ಬೇಕಿರುವುದರಿಂದ ಬಿಬಿಎಂಪಿ ಹಿಂದೂ ಸಂಘಟನೆಯ ಮನವಿ ತಿರಸ್ಕರಿಸಿತ್ತು.
ಮೈದಾನದ ವಿವಾದ ಹೆಚ್ಚಾದ ನಂತರ ಪೊಲೀಸರು ನಿರಂತರವಾಗಿ ಈದ್ಗಾ ಮೈದಾನದಲ್ಲಿ ಕಾವಲು ಕಾಯುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಈಗಾಗಲೇ ಮೈದಾನದ ಸುತ್ತಲೂ ಸಿಸಿಟಿವಿ ಸಹ ಅಳವಡಿಸಿದ್ದಾರೆ.
ಹಿಂದೂ ಸಂಘಟನೆಗಳ ಮನವಿ: ಇದೀಗ ಬಿಬಿಎಂಪಿ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹಿಂದೂ ಸಂಘಟನೆಗಳು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಹಬ್ಬ ಸೇರಿದಂತೆ ವಿವಿಧ ಸಾರ್ವಜನಿಕ ಹಬ್ಬಗಳನ್ನು ಆಚರಿಸಲು ಸಂಘಟನೆಗಳು ಮುಂದಾಗಿವೆ. ಆದರೆ ಬಿಬಿಎಂಪಿ ಮತ್ತು ನ್ಯಾಯಾಲಯದ ಅನುಮತಿ ಪಡೆದು ಕಾರ್ಯಕ್ರಮವನ್ನು ನಡೆಸಬೇಕಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಮುಸ್ಲಿಂ ವಿದ್ಯಾರ್ಥಿನಿಯರು