ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ಚೇಳು ಇದ್ದಂತೆ. ಕಾಂಗ್ರೆಸ್ನವರು ಕುಡುಕರು. ಕುಡಿಯಲಿಲ್ಲ ಅಂದ್ರೆ ಅವರಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಯಾವ ಪಾಡಿಗೆ ಕಾಂಗ್ರೆಸ್ಗೆ ಹೋಗಿದ್ದಾರೆ?. ಹೊಟ್ಟೆ ಪಾಡಿಗೆ ಹೋದ್ರಾ? ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ದಲಿತರ ಬಗ್ಗೆ ಈ ರೀತಿ ಮಾತನಾಡಲು ಸಿದ್ದರಾಮಯ್ಯಗೆ ಯಾವ ನೈತಿಕ ಹಕ್ಕಿದೆ?. ಕಾಂಗ್ರೆಸ್ನಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಅಂತ ದೊಡ್ಡ ಕೂಗಿತ್ತು. ಆದರೆ ಸಿದ್ದರಾಮಯ್ಯ ದಲಿತರನ್ನ ತುಳಿದು ಇಡೀ ಕಾಂಗ್ರೆಸ್ಸಿಗರನ್ನು ಬ್ಲಾಕ್ ಮೇಲ್ ಮಾಡಿ, ದಲಿತರ ಸಂಹಾರ ಮಾಡಿ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಒಬ್ಬ ಕಪಟ ರಾಜಕಾರಣಿ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ತುಳಿದಿದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿಯಾಗಿರಬೇಕಿತ್ತು. ಆದರೆ ಪರಮೇಶ್ವರ್ ಅವರನ್ನ ಸಿದ್ದರಾಮಯ್ಯ ಸೋಲಿಸಿಬಿಟ್ರು. ಅವರು ಇದನ್ನ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ ಅಷ್ಟೇ. ಕಾಂಗ್ರೆಸ್ ಮುಖಂಡರು ಬೋನ್ ಲೆಸ್ ಲೀಡರ್. ಬಂಗಾರಪ್ಪ ಯಾವಾಗಲೂ ಒಂದು ಮಾತು ಹೇಳ್ತಿದ್ದರು. ಅವರು ರಾಜಕೀಯ ಸ್ಕಾರ್ಪಿಯನ್ ಬಗ್ಗೆ ಮಾತನಾಡುತ್ತಿದ್ದರು. ಈ ಮಾತು ಸಿದ್ದರಾಮಯ್ಯನವರಿಗೆ ಸೂಟ್ ಆಗುತ್ತದೆ ಎಂದರು.
ದೇವೇಗೌಡರು, ಖರ್ಗೆ, ವಿಶ್ವನಾಥ್, ರೇವಣ್ಣ ಅವರ ಪರಿಸ್ಥಿತಿ ಏನಾಗಿದೆ ಈಗ?. ಸಿದ್ದರಾಮಯ್ಯ ಅವರ ಸಮುದಾಯದವರನ್ನೇ ಬೆಳೆಯೋಕೆ ಬಿಟ್ಟಿಲ್ಲ. ಕಾಂಗ್ರೆಸ್ನವರು ಸಿದ್ದರಾಮಯ್ಯರನ್ನು ನೋಡಿ ಹೆದರಿಕೊಂಡಿದ್ದಾರೆ. ಎಲ್ಲಿ ನಮ್ಮನ್ನು ಮುಗಿಸಿ ಬಿಡ್ತಾರೆ ಅಂತಾ ಭಯದಲ್ಲಿದ್ದಾರೆ. ಸಿದ್ದರಾಮಯ್ಯರನ್ನು ನೆನಪಿಸಿಕೊಂಡರೆ ಎಲ್ಲರ ಬಟ್ಟೆ ಹಸಿಯಾಗುತ್ತದೆ ಎಂದರು.
ಕಾಂಗ್ರೆಸ್ ಸದಸ್ಯತ್ವ ಪಡೆಯಬೇಕು ಅಂದ್ರೆ ಖಾದಿ ತೊಡುತ್ತೇನೆ, ಮದ್ಯ ಕುಡಿಯುವುದಿಲ್ಲ ಎಂದು ಸಹಿ ಹಾಕಬೇಕು. ಆದರೆ ಅವರ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರೇ ಇದನ್ನು ಪಾಲಿಸಲ್ಲ. ಅವರೆಲ್ಲಿ ಖಾದಿ ಧರಿಸುತ್ತಾರೆ?, ಸದಾ ಜೀನ್ಸ್ನಲ್ಲಿ ಇರುತ್ತಾರೆ ಎಂದು ಟೀಕಿಸಿದರು.
ಕುಡಿಯುವವರಿಗೆ ಸದಸ್ಯತ್ವ ಇಲ್ಲ ಎಂದು ಕಾಂಗ್ರೆಸ್ ಸದಸ್ಯತ್ವ ಹೊತ್ತಿಗೆಯಲ್ಲಿದೆ. ಆದರೆ ಕಾಂಗ್ರೆಸ್ನವರು ಕುಡುಕರು. ಕುಡಿಯಲಿಲ್ಲ ಅಂದ್ರೆ ಅವರಿಗೆ ರಾತ್ರಿ ನಿದ್ದೆ ಬರುವುದಿಲ್ಲ. ಕುಡುಕರಿಗೆ ಟಿಕೆಟ್ ಇಲ್ಲ ಅಂತಾದರೆ ಕಾಂಗ್ರೆಸ್ನಲ್ಲಿ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳೇ ಸಿಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಅತ್ಯಂತ ಸಂತೃಷ್ಟರಾಗಿರುವವರು ಮುಸ್ಲಿಮರು. ಕಾಂಗ್ರೆಸ್ ಭಯಕ್ಕೆ ಮುಸ್ಲಿಮರು ಬಿಜೆಪಿಗೆ ಬರುತ್ತಿಲ್ಲ. ಬಂದಿದ್ದರೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದೆವು. ಇವರ ಬಂಡವಾಳ ದಲಿತರಿಗೆ ಗೊತ್ತಾಗಿ ನಾವೆಲ್ಲಾ ಕಾಂಗ್ರೆಸ್ನಿಂದ ಹೊರಬಂದಿದ್ದೇವೆ. ಕಾಂಗ್ರೆಸ್ ಬಂಡವಾಳ ಈಗ ಮುಸ್ಲಿಮರಿಗೂ ಗೊತ್ತಾಗಿದೆ. ಅವರೂ ಹೊರ ಬರುತ್ತಿದ್ದಾರೆ ಎಂದರು.