ಬೆಂಗಳೂರು: ವಿವಿಧ ರಾಜ್ಯಗಳ ನಡುವೆ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಯೋಜನೆ ಜಾರಿ ಬಗ್ಗೆ ಇರುವ ಅಡ್ಡಿಗಳ ಕುರಿತು ಆಯಾ ರಾಜ್ಯಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಪ್ರಮುಖರೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಮೇಕೆದಾಟು ಯೋಜನೆ ವಿವಾದವು ಸಿಡಬ್ಲ್ಯೂಸಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿದೆ. ನದಿ ಪಾತ್ರದ ರಾಜ್ಯಗಳು ಕೋರ್ಟ್ ಹೊರಗಡೆಯೇ ಪರಸ್ಪರ ಮಾತುಕತೆ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಜೊತೆ ಸೌಹಾರ್ದಯುತವಾಗಿ ಬಗೆಹರಿಸಲು ಸಿದ್ಧವಿದೆ ಎಂದರು.
ಕರ್ನಾಟಕದಲ್ಲಿ ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷವು ರಾಜಕೀಯ ಮಾಡುತ್ತಿದೆ. 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಸಮಸ್ಯೆ ಬಗೆಹರಿಸದ ಕಾರಣ ವಿವಾದವು ಈ ಮಟ್ಟಕ್ಕೆ ತಲುಪಿದೆ ಎಂದು ಟೀಕಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಉತ್ತರಪ್ರದೇಶ ಕೆನ್ ಬೆಟ್ವಾ ಪ್ರದೇಶದಂತೆ ರಾಜ್ಯದಲ್ಲಿಯೂ ಅಂತಾರಾಜ್ಯ ಜಲ ವಿವಾದ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.
ಓದಿ; ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ