ಬೆಂಗಳೂರು : ದೇಶದ ವಿವಿಧ ಭಾಗಗಳಿಂದ ಒಟ್ಟು 8,848 ಕಪ್ಪು ಫಂಗಸ್ (ಮ್ಯುಕೋರ್ ಮೈಕೋಸಿಸ್) ಪ್ರಕರಣಗಳು ವರದಿಯಾಗಿದ್ದು, ಕೇಂದ್ರ ಸರ್ಕಾರ ಇಂದು ರಾಜ್ಯಗಳಿಗೆ 23,680 ವಯಲ್ಸ್ ಅ್ಯಂಫೋಟೆರಿಸಿನ್-ಬಿ (Amphotericin-B) ಔಷಧವನ್ನು ಹಂಚಿಕೆ ಮಾಡಿದೆ.
ಈ ಪೈಕಿ ಕರ್ನಾಟಕಕ್ಕೆ1270 ವಯಲ್ಸ್ ಅ್ಯಂಫೋಟೆರಿಸಿನ್-ಬಿ ಒದಗಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಮಾರು 500 ಕಪ್ಪುಶಿಲೀಂಧ್ರ ಪ್ರಕರಣರಣಗಳಿರುವ ರಾಜ್ಯಕ್ಕೆ1270 ಸೀಸೆ ಅ್ಯಂಫೋಟೆರಿಸಿನ್-ಬಿ ಒದಗಿಸಲಾಗಿದೆ.
ಈ ಹಿಂದೆ ರಾಜ್ಯಕ್ಕೆ ಕೇಂದ್ರದಿಂದ ಮೂರು ಕಂತಿನಲ್ಲಿ 1660 ಡೋಸ್ ಅ್ಯಂಫೋಟೆರಿಸಿನ್-ಬಿ ಒದಗಿಸಲಾಗಿತ್ತು. ದೇಶದಲ್ಲಿ ಸೀಮಿತವಾಗಿ ಲಭ್ಯವಿರುವ ಈ ಔಷಧವನ್ನು ಕೇಂದ್ರ ಎಲ್ಲ ರಾಜ್ಯಗಳಿಗೂ ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ ನ್ಯಾಯಯುತವಾಗಿ ಹಂಚಿಕೆ ಮಾಡುತ್ತಿದೆ. ಬರುವ ದಿನಗಳಲ್ಲಿ ದೇಶಾದ್ಯಂತ ಇದು ವಿಫುಲವಾಗಿ ಲಭ್ಯವಾಗಲಿದೆ ಎಂದಿದ್ದಾರೆ.
ಸ್ವದೇಶಿಯವಾಗಿ ಅ್ಯಂಫೋಟೆರಿಸಿನ್-ಬಿ ಉತ್ಪಾದನೆ ಹೆಚ್ಚಳಕ್ಕೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳಾದ ಭಾರತ್ ಸೆರಮ್ಸ್ ಮತ್ತು ವ್ಯಾಕ್ಸಿನ್ ಸಂಸ್ಥೆ, ಬಿಡಿಆರ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಸನ್ ಫಾರ್ಮಾ ಲಿಮಿಟೆಡ್, ಸಿಪ್ಲಾ ಲಿಮಿಟೆಡ್ ಮತ್ತು ಲೈಫ್ ಕೇರ್ ಇನ್ನೋವೇಶನ್ಸ್ ಇದರ ಉತ್ಪಾದನೆ ಮಾಡುತ್ತಿದ್ದವು.
ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಾದ ನ್ಯಾಟ್ಕೊ ಫಾರ್ಮಾಸ್ಯುಟಿಕಲ್ಸ್ ಹೈದರಾಬಾದ್, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ವಡೋದರಾ, ಗುಫಿಕ್ ಬಯೋಸೈನ್ಸ್ ಲಿಮಿಟೆಡ್ ಗುಜರಾತ್, ಎಮ್‌ಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಪುಣೆ ಮತ್ತು ಲೈಕಾ ಗುಜರಾತ್ಗೆ ಲೈಸನ್ಸ್ ದೊರಕಿಸಿಕೊಡಲಾಗಿದೆ.
ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಅ್ಯಂಫೋಟೆರಿಸಿನ್-ಬಿ ಉತ್ಪಾದನೆ ಮಾಡಲಿವೆ ಎಂದು ಫಾರ್ಮಾ ಇಲಾಖೆಯನ್ನೂ ಹೊಂದಿರುವ ಸದಾನಂದ ಗೌಡ ವಿವರಿಸಿದರು. ಹಾಗೆಯೇ, ವಿದೇಶಗಳಿಂದ ಈ ತಿಂಗಳ ಒಳಗಾಗಿ 3.63 ಲಕ್ಷ ಡೋಸ್ ಅ್ಯಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳುತ್ತಿದ್ದೇವೆ.
ಹೀಗಾಗಿ, ದೇಶದಲ್ಲಿ ಈ ತಿಂಗಳು ಒಟ್ಟು 5.26 ಲಕ್ಷ ಸೀಸೆ ಔಷಧ ಲಭ್ಯವಿರಲಿದೆ. ಮುಂದಿನ ತಿಂಗಳು 3.15 ಲಕ್ಷ ಡೋಸ್ ಆಮದು ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿಗೆ ಆಮದುಮಾಡಿಕೊಳ್ಳುತ್ತೇವೆ. ಅ್ಯಂಫೋಟೆರಿಸಿನ್-ಬಿ ಹಲವು ಕಂತುಗಳಲ್ಲಿ ಭಾರತ ತಲುಪುತ್ತಿದೆ.
ಇಂದು ಕೂಡ ಸುಮಾರು 40 ಸಾವಿರ ಸೀಸೆ ಭಾರತ ತಲುಪುವುದೆಂದು ನಿರೀಕ್ಷಿಸಲಾಗಿದೆ. ಅವು ಬರುತ್ತಿದ್ದಂತೆ ವಿವಿಧ ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ಹಂಚಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆ. ಇನ್ನು, ಅ್ಯಂಫೋಟೆರಿಸಿನ್-ಬಿಗೆ ಪರ್ಯಾಯ ಔಷಧಗಳೂ ಇವೆ. ಹಾಗಾಗಿ, ಕಪ್ಪುಶಿಲೀಂಧ್ರ ರೋಗಕ್ಕೆ ಔಷಧ ಕೊರತೆಯಾಗುತ್ತದೆ ಎಂದು ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.
ರಾಜ್ಯಕ್ಕೆ ಮತ್ತೆ 4.25 ಲಕ್ಷ ಸೀಸೆ ರೆಮ್ಡಿಸಿವಿರ್
ಬೇರೆ ಬೇರೆ ರಾಜ್ಯಗಳಿಗೆ ಮುಂದಿನ ವಾರದ (ಮೇ 24 - ಮೇ 30) ಬಳಕೆಗಾಗಿ 22.17 ಲಕ್ಷ ಡೋಸ್ ರೆಮ್ಡಿಸಿವಿರ್ ಹಂಚಿಕೆ ಮಾಡಿದ್ದೇವೆ. ಕರ್ನಾಟಕಕ್ಕೆ 4.25 ಲಕ್ಷ ಸೀಸೆ ರೆಮ್ಡಿಸಿವಿರ್ ನಿಗದಿಪಡಿಸಲಾಗಿದೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.
ಕೇಂದ್ರವು ರಾಜ್ಯಗಳಿಗೆ ಏಪ್ರಿಲ್ 21ರಿಂದ ಇದುವರೆಗೆ ಒಟ್ಟು 98.8 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ ಕಳೆದ ವಾರವೂ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ಒದಗಿಸಲಾಗಿತ್ತು. ಹೀಗಾಗಿ, ರಾಜ್ಯಕ್ಕೆ ಇದುವರಗೆ 14.25 ಲಕ್ಷ ಸೀಸೆ ರೆಮ್ಡಿಸಿವಿರ್ ದೊರೆತಂತಾಗಿದೆ ಎಂದಿದ್ದಾರೆ.