ಬೆಂಗಳೂರು : 'ತ್ರಿಭಾಷಾ ಸೂತ್ರ'ವನ್ನು 1948-49 ರಲ್ಲೇ ವಿಶ್ವವಿದ್ಯಾಲಯ ಶೈಕ್ಷಣಿಕ ಆಯೋಗ ರೂಪಿಸಿದ್ದು, ಕೇಂದ್ರ ಸರ್ಕಾರ 1968 ರಲ್ಲಿ ಈ ಸೂತ್ರವನ್ನು ರಾಷ್ಟ್ರೀಯ ನೀತಿಯಾಗಿ ಅಂಗೀಕಾರ ಮಾಡಿತು. ಇದರ ಪ್ರಕಾರ ಉತ್ತರ ಭಾರತದ ರಾಜ್ಯಗಳಲ್ಲಿ (ಹಿಂದಿ ಪ್ರಧಾನ ಭಾಷೆಯಾಗಿರುವ ರಾಜ್ಯಗಳಲ್ಲಿ) ಹಿಂದಿ, ಇಂಗ್ಲಿಷ್ ಮತ್ತು ಭಾರತದ ಯಾವುದೇ ಪ್ರಾದೇಶಿಕ ಭಾಷೆಯನ್ನು (ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ ನೀಡಬೇಕು) ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ, ಹಿಂದಿ ಮತ್ತು ಇಂಗ್ಲಿಷ್ ಅನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು. ಬಹು ಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಅದರಂತೆ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ ಕಲಿಸುವುದು ಈ ನೀತಿಯ ಉದ್ದೇಶ.
ಓದಿ-ಕಾರ್ಯಕ್ರಮ ಕರ್ನಾಟಕದಲ್ಲಿ ನಡೆದಿದೆ, ಕನ್ನಡ ಇರಲೇಬೇಕಿತ್ತು, ಇಲ್ಲದಿರೋದು ಅಪರಾಧ- ಸಿದ್ದರಾಮಯ್ಯ
ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ 'ಒಂದು ಭಾಷೆ ಒಂದು ಸಂಸ್ಕೃತಿ' ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ. ಅಲ್ಲದೆ, ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು.
ಒಂದು ಹಂತದಲ್ಲಿ ಸ್ವತಂತ್ರ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು. ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜ್ಯ ನಾಯಕರು ಈ ನೀತಿಯನ್ನು ಖಂಡಿಸಿದ್ದರು.
ಓದಿ-ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಕನ್ನಡ ಭಾಷೆಯ ಅವಗಣನೆ : ಹೆಚ್ಡಿಕೆ ಟ್ವೀಟ್
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ಗಮನಕ್ಕೆ ಬಂದಿದ್ದು. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು ಎಂದು ಸಿಎಂ ಆಗಿದ್ದ ಸಂದರ್ಭದಲ್ಲೇ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದರು.
ತ್ರಿಭಾಷಾ ಸೂತ್ರ ಉಲ್ಲಂಘನೆ : ಇದೀಗ ಶಿವಮೊಗ್ಗದ ಭದ್ರಾವತಿಯಲ್ಲಿ ನಿನ್ನೆ ನಡೆದ ಆರ್‌ಎಎಫ್ ಘಟಕಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದ ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿದ್ದು, ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ. ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು, ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಕೇಂದ್ರ ಗೃಹ ಸಚಿವರೇ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ, ಕನ್ನಡಿಗರಿಗೆ ಮಾಡಿದ ಅಗೌರವ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ.
ಹಿಂದಿ-ಆಂಗ್ಲ ಭಾಷೆಯ ನಿಷ್ಠ ಧೋರಣೆಯಲ್ಲಿ ಕನ್ನಡ ಭಾಷೆಯನ್ನು ಅವಗಣನೆ ಮಾಡಿರುವ ಅಮಿತ್ ಶಾ ಅವರ ಧೋರಣೆ ಕನ್ನಡ ವಿರೋಧಿತನವನ್ನು ತೋರಿಸುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ. ಅಮಿತ್ ಶಾ ಅವರು 'ತ್ರಿಭಾಷಾ ಸೂತ್ರ' ಉಲ್ಲಂಘಿಸಿದ್ದಾರೆ. ಅವರು ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.