ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ಶನಿವಾರ ಹಾಜರಾಗಿದ್ದ ಶಂಕಿತ ಆರೋಪಿಗಳು, ಮತ್ತೆ ನೋಟಿಸ್ ನೀಡಿದ ಮೇರೆಗೆ ನರೇಶ್ ಗೌಡ ವಿಚಾರಣೆಗೆ ಹಾಜರಾಗಿದ್ದಾನೆ. ಸಾಹುಕಾರ್ ಸಿಡಿ ಪ್ರಕರಣದ ಕಿಂಗ್ ಪಿನ್ ನರೇಶ್ ಗೌಡಗೆ ಎಸ್ಐಟಿ ಎರಡನೇ ದಿನ ಡ್ರಿಲ್ ನಡೆಸಿದೆ.
ಶನಿವಾರ ಪ್ರಾಥಮಿಕ ವಿಚಾರಣೆ ನಡೆಸಿದ್ದ ಎಸ್ಐಟಿ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿಚಾರಣೆ ಮುಂದುವರೆಸಿದೆ. ಮೊದಲ ದಿನ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ, ಇಂದು ಕೇವಲ ನರೇಶ್ಗೌಡಗೆ ನೊಟೀಸ್ ನೀಡಿತ್ತು. ಅದರಂತೆ ಇಂದು ಬೆಳಗ್ಗೆ 11:30ಕ್ಕೆ ವಿಚಾರಣೆಗೆ ಹಾಜರಾಗಿದ್ದ ನರೇಶ್ ಗೌಡಗೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಅವರು ಸತತ 5 ಗಂಟೆಗಳ ಕಾಲ ವಿಡಿಯೋ ಚಿತ್ರೀಕರಣದ ಸಮ್ಮುಖದಲ್ಲಿ ವಿಚಾರಿಸಿ ವಿವರಣೆ ಪಡೆದಿದ್ದಾರೆ.
ಆರೋಪಿ ನರೇಶ್ ಗೌಡನಿಂದ ಸರಿಸುಮಾರು 20 ಪ್ರಶ್ನೆಗಳಿಗೆ ತನಿಖಾಧಿಕಾರಿ ಧರ್ಮೇಂದ್ರ ಉತ್ತರ ಪಡೆದಿದ್ದಾರೆ. ಪ್ರಮುಖವಾಗಿ ಈತ ಬಳಸುತ್ತಿರುವ ಮೊಬೈಲ್, ಮೊಬೈಲ್ ಯಾರ ಹೆಸರಿನಲ್ಲಿ ಮತ್ತು ಯಾವಾಗ ಖರೀದಿಸಲಾಗಿದೆ, ಬಳಸುತ್ತಿರುವ ಸಾಮಾಜಿಕ ಜಾಲತಾಣದ ಖಾತೆಗಳ ವಿವರ ಪಡೆದಿದೆ. ಅಲ್ಲದೇ ಎಲ್ಲೆಲ್ಲಿ ಕೆಲಸ ಮಾಡಿದ್ರಿ, ತಿಂಗಳ ಆದಾಯ ಎಷ್ಟು? ಖರ್ಚು ಎಷ್ಟು? ಬೇರೆ ಉದ್ಯಮವೇನಾದರೂ ಇದೆಯಾ, ಬೆಂಗಳೂರಿನಲ್ಲಿ ಎಲ್ಲಿ ವಾಸ ಇದ್ರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆದಿದೆ.
ಹಣದ ವಹಿವಾಟಿನ ಬಗ್ಗೆಯೂ ಪ್ರಶ್ನಿಸಿರುವ ತನಿಖಾಧಿಕಾರಿಗಳು ನರೇಶ್ ಹೆಸರಿನಲ್ಲಿರುವ ಒಟ್ಟು ಬ್ಯಾಂಕ್ ಖಾತೆಗಳು, ಬ್ಯಾಲೆನ್ಸ್ ವಿವರ ಪಡೆದುಕೊಂಡಿದ್ದಾರೆ. ಇನ್ನು ಮತ್ತೋರ್ವ ಆರೋಪಿ ಶ್ರವಣ್ಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದ್ದು ಬುಧವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ನರೇಶ್ ಗೌಡಗೆ ಎಸ್ಐಟಿ ನೊಟೀಸ್ ಜಾರಿ ಮಾಡಿದೆ.
ಓದಿ.. ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದ ಆರೋಪಿಗಳು