ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಹಾಗೂ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಿರತರಾಗಿರುವ ಕಾಂಗ್ರೆಸ್ ನಾಯಕರು, ಇಂದು ಬೆಳಗ್ಗೆ ದೈನಂದಿನ ಚಟುವಟಿಕೆ ಆರಂಭಿಸಿದರು. ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ವಿಧಾನಸೌಧದ ಗೋಡೆಗೆ ಹೊಡೆದರೆ ಕಾಸು ಕಾಸು ಕಾಸು ಎನ್ನುತ್ತದೆ ಎಂದು ವ್ಯಂಗ್ಯವಾಡಿದರು.
ಸಂತೋಷ ಪಾಟೀಲ್ ಸಹೋದರ ಏನ್ ಬೇಡಿಕೆ ಇಟ್ಟಿದ್ದಾರೆ ಮೊದಲು ಆ ಕೆಲಸ ಆಗಬೇಕು. ರಾಜೀನಾಮೆ ಅದೆಲ್ಲ ಗೊತ್ತಿಲ್ಲ. ಈಶ್ವರಪ್ಪ ಅವರ ಬಂಧನವಾಗಬೇಕು. ಸಂತೋಷ ಅವರ ಪತ್ನಿಗೆ ಕೆಲಸ ಕೊಡಬೇಕು. ಭ್ರಷ್ಟಾಚಾರದ ಆರೋಪದಡಿ ಎಫ್ಐಆರ್ ಹಾಕಿ ಈಶ್ವರಪ್ಪನವರನ್ನ ಬಂಧಿಸಬೇಕು. 24 ಗಂಟೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದು, ಅಂತೆಯೇ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಹೈಕೋರ್ಟ್ ಗೇಟ್ ಮುಂಭಾಗದಲ್ಲಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈಶ್ವರಪ್ಪ ರಾಜೀನಾಮೆ ನಮ್ಮ ಆದ್ಯತೆ ಆಗಿರಲಿಲ್ಲ. ಈಗಲೂ ಅವರು ರಾಜೀನಾಮೆ ಕೊಡ್ತಾರಾ ಅನ್ನೋದು ನನಗೆ ಡೌಟ್ ಇದೆ. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಕೇಸ್ ದಾಖಲಾಗಬೇಕು. 'ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್' ಇದ್ದಂತೆ ಎಂದರು.
ಎಲ್ಲಾ ಪಂಚಾಯತ್, ಸರ್ಕಾರಿ ಕಚೇರಿಯಲ್ಲಿ ಲಂಚ ಲಂಚ. ಕೆಂಪಣ್ಣ ಯಾರು ಅಂತಾ ನನಗೆ ಗೊತ್ತಿಲ್ಲ. ಈ ಸಿಸ್ಟಮ್ ಕ್ಲೀನ್ ಮಾಡೋಕೆ ಹೋರಾಟ ಮಾಡುತ್ತಿದ್ದಾರೆ. ಬಿಬಿಎಂಪಿ ಕಸ ತೆಗೆಯುವ ಕಂಟ್ರಾಕ್ಟರ್ ಒಬ್ಬರು ಹೇಳಿದ್ದಾರೆ. ಶೇ.40ರಷ್ಟು ಕಮಿಷನ್ ಅಲ್ಲ, ಶೇ.50ರಷ್ಟು ಎಂದು ಮಾಧ್ಯಮವೊಂದಕ್ಕೆ ಸಂತೋಷ ಪತ್ನಿ ಮಾತನಾಡಿರುವುದನ್ನು ಡಿಕೆಶಿ ಮೊಬೈಲ್ನಲ್ಲಿ ಪ್ಲೇ ಮಾಡಿ ತೋರಿಸಿದರು.
ಇನ್ನು ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕಾರಣಿಯಲ್ಲೂ ಪ್ರತಿಭಟನೆ ಮಾಡುತ್ತೇವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪ ತಪ್ಪು ಮಾಡಿಲ್ಲ ಎಂದಿದ್ದಾರೆ. ಹೀಗೆ ಸಿಎಂ ಹೇಳಿದ ಮೇಲೆ ಯಾವ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ?. ಮುಖ್ಯಮಂತ್ರಿಗಳೇ ಪೊಲೀಸ್ ಆಡಳಿತಕ್ಕೆ ಕಪ್ಪು ಚುಕ್ಕಿ ಇಡುತ್ತಿದ್ದೀರಾ? ಎಂದು ಡಿಕೆಶಿ ಪ್ರಶ್ನಿಸಿದರು.
ಬೆಳಗಿನ ಚಟುವಟಿಕೆ : ರಾತ್ರಿ ವಿಧಾನಸೌಧದಲ್ಲಿಯೇ ತಂಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಇತರೆ ನಾಯಕರು ಬೆಳಗ್ಗೆ ಎದ್ದು ದಿನಪತ್ರಿಕೆಗಳನ್ನು ಓದಿದರು. ಅತ್ಯಂತ ಮುಖ್ಯವಾಗಿ ನಿನ್ನೆ ಬೆಂಗಳೂರಿನಲ್ಲಿ ಕೈಗೊಂಡ ತಮ್ಮ ಪ್ರತಿಭಟನೆಗಳ ಸುದ್ದಿ ಯಾವ ರೀತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂಬ ಮಾಹಿತಿ ಪಡೆದರು.
ನಿನ್ನೆ ರಾತ್ರಿ ವಿಧಾನಸೌಧ ಹೈಕೋರ್ಟ್ ಪ್ರವೇಶದ್ವಾರದಲ್ಲಿ ಧರಣಿ ನಡೆಸಿದ್ದ ಕಾಂಗ್ರೆಸ್ ನಾಯಕರು ರಾತ್ರಿ ಒಳಭಾಗದ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆ ಇವರಿಗೆ ಉಪಹಾರದ ವ್ಯವಸ್ಥೆಯನ್ನು ಪಕ್ಷದ ವತಿಯಿಂದಲೇ ಮಾಡಲಾಗಿತ್ತು. 24 ಗಂಟೆಗಳ ಧರಣಿಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಇದಾದ ಬಳಿಕ ವಿಧಾನಸೌಧದಿಂದ ಹೊರಟು ಮುಂದಿನ ಹೋರಾಟದ ರೂಪುರೇಷೆಯನ್ನು ಪ್ರತ್ಯೇಕವಾಗಿ ಸಭೆ ನಡೆಸಿ ನಿರ್ಧರಿಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಕೆ ಎಸ್ ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ : ಸಿಎಂ ಬೊಮ್ಮಾಯಿ