ಬೆಂಗಳೂರು: ಅಂತರಾಜ್ಯ ಬೃಹತ್ ಅಕ್ರಮ ಶಸ್ತ್ರಾಸ್ತ್ರ ಡೀಲ್ ಬಯಲಿಗೆಳೆಯುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದು, ಮುಂಬೈ ಮಾದರಿಯಲ್ಲಿ ಬೆಂಗಳೂರು ಅಂಡರ್ವಲ್ಡ್ ಆಗಿ ಬದಲಾಗುತ್ತಿದೆಯಾ ಎಂಬ ಅನುಮಾನ ಮೂಡಿಸುವಂತೆ ಮಾಡಿದೆ. ಅಲ್ಲದೇ, ರಾಜಧಾನಿಯಲ್ಲಿ ಆ್ಯಕ್ಟಿವ್ ರೌಡಿಗಳ ಗ್ಯಾಂಗ್ ವಾರ್ಗೆ ಶಸ್ತ್ರಾಸ್ತ್ರ ಸಪ್ಲೈ ಆಗ್ತಿದೆಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಸಿಸಿಬಿ ಪೊಲೀಸರು ಏಳು ದಿನದ ಹಿಂದೆ ದಾಳಿ ನೆಡೆಸಿ ಅಕ್ರಮವಾಗಿ ಅಂತರ ರಾಜ್ಯ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ವಶಕ್ಕೆ ಪಡೆದಿದ್ದು, ಇಂದು ಬೆಳಕಿಗೆ ಬಂದಿತ್ತು. ನಗರದಲ್ಲಿ ದಾಳಿ ನೆಡಸಿ ಬೆಂಗಳೂರು ಮೂಲದ ಅಯಾಜ್ ಉಲ್ಲಾ, ಸೈಯದ್ ಸಿರಾಜ್ , ಮಹಮದ್ ಅಲಿ, ಅರುಣ್ ಕುಮಾರ್ ಎಂಬುವವರನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶ ಶಾಮಲಿಯಿಂದ ಮತ್ತು ಪಂಜಾಬ್ನ ಅಮೃತಸರ ಹಾಗೂ ಮಹಾರಾಷ್ಟ್ರದ ಶಿರಡಿಯಿಂದ ಪಿಸ್ತೂಲ್ಗಳನ್ನು ಸಿಲಿಕಾನ್ ಸಿಟಿಗೆ ಆರೋಪಿಗಳು ತರುತಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿತ್ತು.
ಅಯಾಜುಲ್ಲಾ ಎನ್ನುವವ ಆರೋಪಿ ಅಕ್ರಮವಾಗಿ ಬಂದೂಕುಗಳನ್ನು ತಗೆದುಕೊಂಡು ಬರುತ್ತಿದ್ದ. ಈ ಹಿಂದೆ ಎರಡು ಡಕಾಯಿತಿ ಕೇಸ್ನಲ್ಲಿ ಈತ ಭಾಗಿಯಾಗಿದ್ದ. ಸೈಯದ್ ಸಿರಾಜ್ ಎನ್ನುವವನು ಅಯಾಜುಲ್ಲಾ ನಿಂದ ಪಿಸ್ತೂಲ್ ಹಾಗೂ ಬಂದೂಕುಗಳನ್ನು ತೆಗೆದುಕೊಂಡು ಇಟ್ಟುಕೊಳ್ಳುತ್ತಿದ್ದ. ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಸೈಯದ್ ಸಿರಾಜ್ ಅರೆಸ್ಟ್ ಆಗಿದ್ದ.
ಶಿವಾಜಿನಗರ ರೌಡಿ ಶೀಟರ್ ಆಗಿದ್ದ ಮೊಹಮ್ಮದ್ ಅಲಿ ಸಹ ಪಿಸ್ತೂಲ್ ಹಾಗೂ ಬಂದೂಕನ್ನು ಖರೀದಿ ಮಾಡಿದ್ದ. ತನ್ನ ಜೊತೆಯಲ್ಲೇ ಅಕ್ರಮವಾಗಿ ಪಿಸ್ತೂಲ್ ಮತ್ತು ಗನ್ ಅನ್ನು ಇಟ್ಟುಕೊಂಡಿದ್ದ. ಅರುಣ್ ತುಮಕೂರಿನಲ್ಲಿ ರೌಡಿ ಶೀಟರ್ ಆಗಿದ್ದು, ಕೊಲೆ ಸೇರಿ ಹಲವು ಕೇಸ್ನಲ್ಲಿ ಭಾಗಿಯಾಗಿದ್ದ. ಅರುಣ್ ಕುಮಾರ್ ಅಲಿಯಾಸ್ ಲಾಂಗ್ ಅರುಣ್ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಅನ್ನು ಸೈಯದ್ ಸಿರಾಜ್ ನಿಂದ ಪಡೆದುಕೊಂಡಿದ್ದ.
ಇದೀಗ ಸಿಸಿಬಿ ಯಿಂದ ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ರೈಫಲ್ ಸೇರಿ ಏಳು ಆಯುಧಗಳು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಹತ್ತೊಂಬತ್ತು ಸಜೀವ ಗುಂಡುಗಳು ಸಹ ಸಿಜ್ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಇನ್ನು 6 ರಿಂದ 7 ಜನ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಹಿಸ್ಟರಿ
ಅಯಾಜ್ವುಲ್ಲ ಅಲಿಯಾಸ್ ಶಫಿವುಲ್ಲಾನೇ ಅಕ್ರಮ ಶಸ್ತ್ರಾಸ್ತ್ರ ಸಾಗಾಟದ ಕಿಂಗ್ ಪಿನ್ ಎನ್ನಲಾಗುತ್ತಿದೆ. ಯುಪಿ, ಮಹಾರಾಷ್ರ್ಟ, ಪಂಜಾಬ್ ರಾಜ್ಯಗಳಿಂದ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ನಡೆಯುತ್ತಿತ್ತು. ಈ ರಾಜ್ಯಗಳಲ್ಲಿ ಅಯಾಜ್ ಸಹಚರರು ಆ್ಯಕ್ಟಿವ್ ಆಗಿದ್ದರು. ಅವರ ಮೂಲಕ ಅಕ್ರಮವಾಗಿ ಬೆಂಗಳೂರಿಗೆ ಶಸ್ತ್ರಾಸ್ತ್ರ ಸಾಗಾಟ ನಡೆಯುತ್ತಿತ್ತು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
- ಅಯಾಜ್ವುಲ್ಲಾ ಅಲಿಯಾಸ್ ಶಫಿವುಲ್ಲಾ : ಅಕ್ರಮ ಶಸ್ತ್ರಾಸ್ತ್ರಗಳ ಕಿಂಗ್ ಪಿನ್ ಬೆಂಗಳೂರಿನ ನಂಟು ಹೊಂದಿದ್ದ. ಬಾಣಸವಾಡಿಯ ಡಕಾಯಿತಿ ಯತ್ನ ಕೇಸ್ನಲ್ಲಿ ಬಂಧಿತನಾಗಿದ್ದ.
- ಸೈಯ್ಯದ್ ಸಿರಾಜ್ ಅಹ್ಮದ್: ಸೈಯ್ಯದ್ ವಿರುದ್ಧ ಬೆಂಗಳೂರಿನಲ್ಲಿ ಎರಡು ಕೇಸ್ ದಾಖಲಾಗಿದೆ. ಕೆಜಿ ಹಳ್ಳಿ ಠಾಣೆಯಲ್ಲಿ 2010ರಲ್ಲಿ ಆರ್ಮ್ಸ್ ಆಕ್ಟ್ ಅಡಿ ಕೇಸ್ ದಾಖಲಾಗಿತ್ತು. ಆರ್ ಟಿ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಕಿಂಗ್ ಪಿನ್ ನಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಕಂಟ್ರಿಮೇಡ್ ರೈಫಲ್ ಖರೀದಿಸಿದ್ದ.
- ಮೊಹಮ್ಮದ್ ಅಲಿ ಅಲಿಯಾಸ್ ಸಿರಾಜ್: ಈತ ಶಿವಾಜಿನಗರ ರೌಡಿ ಶೀಟರ್. ಸಿರಾಜ್ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ಹಲ್ಲೆ ಕೇಸ್ ದಾಖಲಾಗಿದೆ. ಕಿಂಗ್ಪಿನ್ ನಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಕಂಟ್ರಿಮೇಡ್ ರೈಫಲ್ ತೆಗೆದುಕೊಂಡಿದ್ದ.
- ಅರುಣ್ ಕುಮಾರ್ ಅಲಿಯಾಸ್ ಲಾಂಗ್ ಅರುಣ: 2016 ರಲ್ಲಿ ತುಮಕೂರಿನ ಕೊರಟಗೆರೆಯಲ್ಲಿ ಡಕಾಯಿತಿ ಯತ್ನ ಕೇಸ್, 2017 ರಲ್ಲಿ ಮಂಚೇನಹಳ್ಳಯಲ್ಲಿ ಕೊಲೆಗೆ ಯತ್ನ, 2018 ರಲ್ಲಿ ಗೌರಿಬಿದನೂರಿನಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ನಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಜಪ್ತಿ ಮಾಡಲಾಗಿದೆ.