ಬೆಂಗಳೂರು: ಪ್ರಭಾವಿಗಳ ಜೊತೆಗಿನ ಕಲರ್ ಕಲರ್ ಫೋಟೋ ಹಾಗೂ ಬಣ್ಣ ಬಣ್ಣದ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಯ ಬಣ್ಣ ಬಯಲಾಗಿದೆ. ಬಿಜೆಪಿ ನಾಯಕರ ಜೊತೆ ಇರುವ ಫೋಟೊ ತೋರಿಸಿ ಮಾತಿನಲ್ಲೇ ನಂಬಿಸಿ ಪಂಗನಾಮ ಹಾಕಿ, ಕೋಟಿ ಕೋಟಿ ಹಣ ಗಳಿಸಿದ್ದ ಆರೋಪಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿ, 50 ಕೋಟಿಗೂ ಅಧಿಕ ಮೌಲ್ಯದ ಚೆಕ್ಗಳು ಪತ್ತೆಯಾಗಿವೆ.
ಜನಸಾಮಾನ್ಯರಿಗಷ್ಟೇ ಅಲ್ಲ ಸಚಿವರಿಗೆ ಒಳ್ಳೆ ಹುದ್ದೆ ಕೊಡಿಸ್ತೀನಿ ಅಂತ ಮೂರು ನಾಮ ಹಾಕಿರುವ ಇವನ ಹೆಸರು ಯುವರಾಜ ಅಲಿಯಾಸ್ ಸ್ವಾಮಿ. ಇಲ್ಲಿನ ನಾಗರಭಾವಿ ಏರಿಯಾದಲ್ಲಿ ಐಷಾರಾಮಿ ಬಂಗಲೆ. ಬಂಗಲೆಯಲ್ಲಿ ಕಂತೆ ಕಂತೆ ಹಣ, ಚೆಕ್ಕುಗಳನ್ನು ನೋಡಿ ಸಿಸಿಬಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.
ತಾನು ಆರ್.ಎಸ್.ಎಸ್ ಮುಖಂಡ, ಕೇಂದ್ರದ ದೊಡ್ಡ ದೊಡ್ಡ ನಾಯಕರ ಸಂಪರ್ಕ ನನಗಿದೆ. ನಿಮಗೆ ಬೇಕಾದ ಕೆಲಸ ಮಾಡಿಸಿ ಕೊಡ್ತೀನಿ, ಆದ್ರೆ ಇಂತಿಷ್ಟು ಹಣ ಕೊಡಬೇಕು ಅಂತಾ ಹೇಳಿ ಹಲವರನ್ನು ಯಾಮಾರಿಸಿದ್ದಾನೆ. ಈ ನಕಲಿ ಆರ್ಎಸ್ಎಸ್ ಮುಖಂಡನಿಗೆ ಇವತ್ತು ಸಿಸಿಬಿ ಸರಿಯಾಗೆ ಶಾಕ್ ನೀಡಿದೆ. ಆರೋಪಿಯ ಮನೆಯಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ.
ಕೋಟಿ ಹೊಡೆದಿದ್ದ ಯುವರಾಜ:
ಸುದೀಂಧ್ರ ರೆಡ್ಡಿ ಎಂಬುವವರೆಗೆ ಕೆಎಸ್ಆರ್ಟಿಸಿ ಚೇರ್ಮನ್ ಹುದ್ದೆ ಕೊಡಿಸ್ತೀನಿ ಅಂತಾ ಒಂದು ಕೋಟಿ ಪೀಕಿದ್ದ. ಆದ್ರೆ ಆಗಿರಲಿಲ್ಲ. ಈ ಹಿನ್ನೆಲೆ ಸುಧೀಂದ್ರ ರೆಡ್ಡಿ ಅವರು ಕೊಟ್ಟ ದೂರಿನ ಮೇಲೆ ಸರ್ಚ್ ವಾರಂಟ್ ಪಡೆದು, ಇಂದು ಬೆಳ್ಳಂಬೆಳಗ್ಗೆ 6.30ಕ್ಕೆ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ 26 ಲಕ್ಷ ನಗದು ಹಣ, 91 ಕೋಟಿ ರೂ ಮೊತ್ತದ ಚೆಕ್, ಅನೇಕ ದಾಖಲೆಗಳು ಪತ್ತೆಯಾಗಿವೆ.
ತನ್ನ ಕಾರು ಚಾಲಕನ ಹೆಸರಲ್ಲೇ ಬ್ಯಾಂಕ್ ಅಕೌಂಟ್ ತೆರೆದು, ಆತನಿಗೆ ಗೊತ್ತಿಲ್ಲದೆಯೇ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದನಂತೆ. ಇದರಿಂದ ಚಾಲಕ ಉಮೇಶ್ಗೆ ಐಟಿ ನೋಟಿಸ್ ಕೂಡ ಬಂದಿತ್ತು. ಇದೆಲ್ಲವನ್ನು ಕೇಳಲು ಹೋದ ಚಾಲಕನಿಗೆ ಕೆನ್ನೆ ಮೇಲೆ ಬಾರಿಸಿ ಕಳಿಸಿದ್ನಂತೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಯುವರಾಜನನ್ನು ವಶಕ್ಕೆ ಪಡೆದಿರುವ ಸಿಸಿಬಿ ತೀವ್ರ ವಿಚಾರಣೆ ಮುಂದುವರೆಸಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ದೋಖಾ : ಸದ್ಯ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಆಸಾಮಿ