ಬೆಂಗಳೂರು: ಡಿ.ಜಿ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್ಡಿಪಿಐ ಪಕ್ಷದ ಕಾರ್ಯಕರ್ತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೆಂಗಳೂರು ನಗರ ಘಟಕದ ಕಾರ್ಯಕರ್ತ ಸಲೀಂ ಬಂಧಿತ ಆರೋಪಿ. ಡಿ.ಜಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಬಳಿ ಪಕ್ಷದ ಕಾರ್ಯಕರ್ತರಿಗೆ ಬರುವಂತೆ ಹೇಳಿದ್ದ ಹಾಗೂ ಗುಂಪುಗೂಡಿ ಗಲಾಟೆ ಮಾಡುವಂತೆ ವಾಟ್ಸಾಪ್ ಮೂಲಕ ಪ್ರಚೋದನಕಾರಿಯಾಗಿ ಸಂದೇಶ ರವಾನಿಸಿದ್ದ ಆರೋಪದಡಿ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದ ಬಳಿಕ ಆರೋಪಿಯ ಮೊಬೈಲ್ನಲ್ಲಿದ್ದ ಗಲಭೆ ದೃಶ್ಯಾವಳಿ ವಿಡಿಯೊ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ವಿಡಿಯೋ ಆಧಾರದ ಮೇಲೆ ಇನ್ನು 50 ಮಂದಿ ಆರೋಪಿಗಳನ್ನು ಬಲೆಗೆ ಬೀಳಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೆ ಹೆಗ್ಗಡೆ ನಗರದಲ್ಲಿರುವ ಎಸ್ಡಿಪಿಐ ಕಚೇರಿ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಕಬ್ಬಿಣದ ರಾಡು, ಬ್ಯಾಟ್ ಸೇರಿದಂತೆ ಇನ್ನಿತರ ಆಯುಧಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯಲ್ಲಿ 8 ಮಂದಿ ಕಾರ್ಯಕರ್ತರು ಸೇರಿದಂತೆ ನಿನ್ನೆ ರಾತ್ರಿ 57 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.