ಬೆಂಗಳೂರು: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ತಯಾರಿಕಾ ಫ್ಯಾಕ್ಟರಿ ಪತ್ತೆಯಾಗಿದೆ. ಕೋಟಿ ಕೋಟಿ ಬೆಲೆಯ ಡ್ರಗ್ಸ್ ಅಡುಗೆ ಮಾಡಲು ಬಳಸುವ ಕುಕ್ಕರ್ನಲ್ಲೇ ತಯಾರಾಗುತ್ತಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ.
ಸಿಂಥೆಟಿಕ್ ಡ್ರಗ್ಸ್ ಎಂದರೆ ನಮಗೆ ವಿದೇಶಗಳಲ್ಲಿನ ಮಾದಕ ಜಾಲ ನೆನಪಾಗುತ್ತದೆ. ಅಲ್ಲಿ ತಯಾರಿಸುವ ಸಿಂಥೆಟಿಕ್ ಡ್ರಗ್ಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ವಿದೇಶದಿಂದ ಡಾರ್ಕ್ ವೆಬ್ ಮೂಲಕ ಡ್ರಗ್ ಮಾರಾಟ ಮಾಡಲಾಗುತ್ತದೆ. ಆದರೆ, ನಗರದಲ್ಲೇ ಮಿನಿ ಡ್ರಗ್ ಫ್ಯಾಕ್ಟರಿ ಓಪನ್ ಮಾಡಿ ಕೋಟಿ ಕೋಟಿ ಬೆಲೆಯ ಡ್ರಗ್ ತಯಾರು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಿಸಿಬಿ ಆ್ಯಂಟಿ ನಾರ್ಕೋಟಿಕ್ ವಿಂಗ್ನ ಅಧಿಕಾರಿ ವಿರೂಪಾಕ್ಷ ಮತ್ತು ಸಿಬ್ಬಂದಿ ಡ್ರಗ್ ಫ್ಯಾಕ್ಟರಿಯನ್ನು ಜಪ್ತಿ ಮಾಡಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.
ಹೊಗೆಯಿಂದ ಎಂಡಿಎಂಎ ಕ್ರಿಸ್ಟಲ್:
ನಗರದ ಸೋಲದೇವನಹಳ್ಳಿಯಲ್ಲಿ ಇಬ್ಬರು ಆಫ್ರಿಕನ್ ಪ್ರಜೆಗಳು ಈ ಡ್ರಗ್ ಫ್ಯಾಕ್ಟರಿ ನಡೆಸುತ್ತಿದ್ದರು. ಮನೆಯಲ್ಲೇ ರಾಸಾಯನಿಕ ಬಳಸಿ ಬೆಲೆಬಾಳುವ ಎಂಡಿಎಂಎ ಕ್ರಿಸ್ಟಲ್ ತಯಾರಿಸುತ್ತಿದ್ದರು. ವಿದೇಶದಿಂದ ಕಚ್ಚಾವಸ್ತುಗಳನ್ನು ಕೊರಿಯರ್ ಮೂಲಕ ತರಿಸಿ ರಾಸಾಯನಿಕಗಳನ್ನು ಕುಕ್ಕರ್ನಲ್ಲಿ ಕುದಿಸಿ ಡ್ರಗ್ ತಯಾರು ಮಾಡುತ್ತಿದ್ದರು. ಪ್ರೆಶರ್ ಕುಕ್ಕರ್ನಲ್ಲಿ ರಾಸಾಯನಿಕ ಬಳಸಿ ಅದನ್ನು ಕುದಿಸಿ ಅದರಿಂದ ಬರುವ ಹೊಗೆಯಿಂದ ಎಂಡಿಎಂಎ ಕ್ರಿಸ್ಟಲ್ ಉತ್ಪಾದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತಾ, ರಿಚರ್ಡ್ ಎನ್ನುವ ವಿದೇಶಿ ಪ್ರಜೆಯನ್ನು ಬಂಧಿಸಿದ್ದೇವೆ. ಈತನ ಅಣ್ಣ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.
ಡ್ರಗ್ಸ್ ವಶ:
ಆರೋಪಿಯಿಂದ 50 ಲಕ್ಷ ಮೌಲ್ಯದ 900 ಗ್ರಾಂ ಕೊಕೆನ್, 50 ಗ್ರಾಂ ಎಮ್.ಡಿ.ಎಮ್.ಎ ಕ್ರಿಸ್ಟಲ್, ಮಾದಕ ವಸ್ತು ತಯಾರಿಕೆಗೆ ಬಳಸುವ 10 ಲೀಟರ್ ಕುಕ್ಕರ್, 5 ಲೀಟರ್ ಕುಕ್ಕರ್ಗೆ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪ್, ಡ್ರಗ್ಸ್ ತಯಾರಿಸಲು ಬೇಕಾದ 930 ಗ್ರಾಂ ಕಚ್ಚಾ ಪದಾರ್ಥಗಳು, 2 ಮೊಬೈಲ್ ಫೋನ್, 1 ತೂಕದ ಯಂತ್ರ, ಬೈಕ್ ವಶಪಡಿಸಿಕೊಂಡಿದ್ದೇವೆ ಎಂದು ರಮಣ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಬ್ಯುಸಿನೆಸ್ ವೀಸಾದಲ್ಲಿ ಬಂದು ಡ್ರಗ್ಸ್ ದಂಧೆ:
ಆರೋಪಿ ರಿಚರ್ಡ್ ತನ್ನ ಅಣ್ಣನೊಂದಿಗೆ 2019 ರಲ್ಲಿ ಬಿಸಿನೆಸ್ ವೀಸಾದಲ್ಲಿ ದೆಹಲಿಗೆ ಬಂದಿದ್ದ. 6 ತಿಂಗಳ ಹಿಂದೆ ನಗರದ ರಾಮಮೂರ್ತಿ ನಗರಕ್ಕೆ ಬಂದು ನೆಲೆಸಿದ್ದರು. 2 ತಿಂಗಳ ಹಿಂದೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ವಾಸ್ತವ್ಯ ಬದಲಾಯಿಸಿ ಮನೆಯಲ್ಲೇ ಪ್ರೆಶರ್ ಕುಕ್ಕರ್ ಬಳಸಿ ಎಮ್.ಡಿ.ಎಮ್.ಎ ಮಾತ್ರೆಗಳನ್ನು ತಯಾರಿಸಿ ನಗರದಿಂದ ದೇಶ, ವಿದೇಶಗಳಿಗೆ ಕಳುಹಿಸುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಮುಖ ನಗರಗಳಲ್ಲಿ ಮಾದಕ ವಸ್ತು ಮಾರಾಟ:
ಆರೋಪಿಯ ಸಹೋದರ ಕೊಕೆನ್ ಬೇರಡೆಯಿಂದ ತರಿಸಿಕೊಳ್ಳುತ್ತಿದ್ದನು. ಕಾಲೇಜು ವಿದ್ಯಾರ್ಥಿಗಳು, ಐಟಿ ಬಿಟಿ ಉದ್ಯೋಗಿಗಳಿಗೆ ಸರಬರಾಜು ಮಾಡುತ್ತಿದ್ದರು. ಜೊತೆಗೆ ಮುಂಬೈ, ಕೊಲ್ಕೊತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದದ್ದು ತನಿಖೆಯಿಂದ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಮಗು ಎದೆ ಹಾಲು ಕುಡಿಯುತ್ತಿಲ್ಲವೆಂದು ಆತ್ಮಹತ್ಯೆಗೆ ಶರಣಾದ ತಾಯಿ!