ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಲಂಚ ಪಡೆದಿರುವುದು ಬಯಲಾಗಿರುವ ಕಾರಣ 12 ಜನ ಚಾಣಾಕ್ಷ ಅಧಿಕಾರಿಗಳನ್ನೊಳಗೊಂಡ ಸಿಬಿಐ ಮಲ್ಟಿ ಡಿಸಿಪ್ಲಿನೆರಿ ಇನ್ವೆಸ್ಟಿಗೇಷನ್ ಟೀಮ್ ತನಿಖೆಯನ್ನ ಚುರುಕುಗೊಳಿಸಿದೆ.
ಈ ಟೀಂನಲ್ಲಿ ಚಾರ್ಟರ್ಡ್ ಅಕೌಂಟೆಂಟ್, ವಿಧಿವಿಜ್ಞಾನ ಲೆಕ್ಕ ಪರಿಶೋಧಕರು, ಕಂಪ್ಯೂಟರ್ ವಿಧಿವಿಜ್ಞಾನ ತಜ್ಞರು ಹಾಗೂ ಬ್ಯಾಂಕಿಂಗ್ಗೆ ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಿದ್ದು, ಐಎಂಎ ಕಂಪನಿಯ ಇಂಚಿಂಚು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ನಿಂದ ಹಲವಾರು ಮಂದಿ ಹಣ ಪಡೆದಿದ್ದಾರೆ. ಹೀಗಾಗಿ ಸಿಬಿಐ ಚಾಣಾಕ್ಷ ತಂಡ ಮನ್ಸೂರ್ನನ್ನ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ತನಿಖೆ ಮುಂದುವರೆಸುವ ಸಾಧ್ಯತೆ ಇದೆ.
ಇತ್ತೀಚೆಗೆ ಸಿಬಿಐ, ಐಎಂಎ ಪ್ರಕರಣದಲ್ಲಿ ಮನ್ಸೂರ್ ಖಾನ್ ಸೇರಿ 20 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. ಈ ಪೈಕಿ 7 ನಿರ್ದೇಶಕರು, 5 ಜನ ಸದಸ್ಯರು, ಒಬ್ಬ ಆಡಿಟರ್ ಹಾಗೂ ಐಎಂಗೆ ಸಂಬಂಧಿಸಿದ 5 ಕಂಪನಿಗಳನ್ನ ಉಲ್ಲೇಖ ಮಾಡಿದ್ದಾರೆ. ಸದ್ಯ ಸಿಬಿಐ ತಂಡ ಸಿಲಿಕಾನ್ ಸಿಟಿಯಲ್ಲಿ ಬೀಡು ಬಿಟ್ಟಿದ್ದು, ಐಎಂಎ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.