ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಜಾತಿ ಗಣತಿ (ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ) ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ.18ಕ್ಕೆ ಮುಂದೂಡಿದೆ.
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷರೂ ಆಗಿರುವ ನಟ ಡಾ. ಮುಖ್ಯಮಂತ್ರಿ ಚಂದ್ರು ಸೇರಿ 13 ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿ ಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ಮಧ್ಯೆ ಹಿರಿಯ ವಕೀಲ ಗುರುಮಠ್ ಅವರು ಹಾಜರಾಗಿ, ಜಾತಿ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಈ ಅರ್ಜಿಗೆ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಬಿ.ಎಸ್. ನಟರಾಜ್, ಶಶಿಧರ ಶಾನುಭೋಗ್ ಮತ್ತು ಕೃಷ್ಣೇಗೌಡ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಸಂವಿಧಾನಾತ್ಮಕ ಅಧಿಕಾರವಿಲ್ಲ. ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯನ್ನು ಬಿಡುಗಡೆ ಮಾಡುವ ಮತ್ತು ವರದಿಯನ್ನು ಬಳಸುವ ಬಗ್ಗೆ ನಿಲುವು ತಿಳಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ, ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ. ಈ ಅಂಶದ ಕುರಿತು ವಾದ ಮಂಡಿಸಲು ಅರ್ಜಿಯಲ್ಲಿ ತಮ್ಮ ಪ್ರತಿವಾದಿ ಮಾಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಲ್ಲ ಅರ್ಜಿಗಳನ್ನು ನ.18ರಂದು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.