ಬೆಂಗಳೂರು: ಕೆಂಗೇರಿಯಲ್ಲಿ ಪುರಸಭೆ ಇದ್ದಾಗ 1998-2001ರಲ್ಲಿ ಎಸ್ಇಡಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇರೆಗೆ ಕೆಂಗೇರಿ ಬಿಬಿಎಂಪಿ ಎಇಇ ಮಾರ್ಕಂಡೇಯಾ ಅವರು ಮೂವರು ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಮೂವರು ಅಧಿಕಾರಿಗಳ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಬೋರಮ್ಮ ಮರಿಲಿಂಗೇಗೌಡ, ಆರ್.ಆಂಜನಪ್ಪ ಹೆಚ್.ಎಂ.ಗುರುಸ್ವಾಮಿ, ಮುಖ್ಯಾಧಿಕಾರಿ ಎಂ.ಹುಲ್ಲೂರಯ್ಯ, ಆರೋಗ್ಯಾಧಿಕಾರಿ ಎನ್.ಕೃಷ್ಣಪ್ಪ ಹಾಗೂ ವ್ಯವಸ್ಥಾಪಕ ಲೋಕೇಶ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಅಂದು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹ 79 ಲಕ್ಷ ಅವ್ಯವಹಾರ ನಡೆದಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಇದರ ವಸೂಲಿಗೆ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಲೋಕಾಯುಕ್ತ ಮೊದಲು ತನಿಖೆ ನಡೆಸಿ ವರದಿ ಸಿದ್ಧಪಡಿಸಿತ್ತು. ಅದರ ಆಧಾರದ ಮೇಲೆ ಹಣ ವಸೂಲಿಗೆ ಸಿವಿಲ್ ದಾವೆ ಹಾಗೂ ಶಿಕ್ಷೆಗಾಗಿ ಕ್ರಿಮಿನಲ್ ಕಾನೂನಿನಡಿ ದೂರು ನೀಡಲಾಗಿದೆ.
ಈಗಾಗಲೇ ಆರೋಪಿ ಹೆಚ್.ಎಂ.ಗುರುಸ್ವಾಮಿಯನ್ನು ಬಂಧಿಸಿದ್ದು, ಉಳಿದಿಬ್ಬರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಪರಾರಿಯಾಗಿದ್ದಾರೆ. ಆಗಿನ ಮುಖ್ಯಾಧಿಕಾರಿಯಾಗಿದ್ದ ಎನ್.ಹುಲ್ಲೂರಯ್ಯ ನಿಧನರಾಗಿದ್ದು, ಎನ್.ಕೃಷ್ಣಪ್ಪ ಹಾಗೂ ಲೋಕೇಶ್ ನಿವೃತ್ತರಾಗಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಲೋಕಾಯುಕ್ತ ನಡೆಸುತ್ತಿದ್ದ ತನಿಖೆಗೆ ಸರಿಯಾದ ರೀತಿಯಲ್ಲಿ ಸಹಕರಿಸದ ಕಾರಣ ಈ ಪ್ರಕರಣ ಮರುಜೀವ ಪಡೆದಿದೆ ಎನ್ನಲಾಗಿದೆ.