ಬೆಂಗಳೂರು: ದೋಸ್ತಿ ಸರ್ಕಾರದ ಅವಧಿಯಲ್ಲಿ ನಿಗಮ ಮಂಡಳಿ ಹಾಗೂ ವಿವಿಧ ಪ್ರಾಧಿಕಾರಗಳಿಗೆ ನೇಮಕಗೊಂಡಿದ್ದ ಅಧ್ಯಕ್ಷರು, ನಿರ್ದೇಶಕರು ಹಾಗೂ ರಾಜಕೀಯ ನೇಮಕಾತಿಗಳನ್ನು ರದ್ದುಪಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಎಲ್ಲಾ ರಾಜಕೀಯ ನೇಮಕಾತಿಗಳನ್ನು ರದ್ದುಪಡಿಸುವಂತೆ ಸಿಎಂ ಆದೇಶ ನೀಡಿದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
![CM order](https://etvbharatimages.akamaized.net/etvbharat/prod-images/appointmentscancel_29072019190023_2907f_1564407023_771.jpg)
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಮತ್ತು ಮುಖಂಡರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ರಾಜ್ಯ ಸರ್ಕಾರದ ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡ ಅಧ್ಯಕ್ಷರ ನೇಮಕಗಳಿಗೂ ಈ ಆದೇಶ ಅನ್ವಯವಾಗುತ್ತಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಹಲವು ಪ್ರಾಧಿಕಾರಗಳಿಗೆ ನೇಮಕಗೊಂಡ ಅಧ್ಯಕ್ಷರು ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.