ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 1- 10ನೇ ತರಗತಿಗಳು ಆರಂಭಗೊಂಡಿದೆ. ಬಹುತೇಕ ಎಲ್ಲ ಭಾಗದಲ್ಲೂ ಮಕ್ಕಳ ದಾಖಲಾತಿ ಅತ್ಯುತ್ತಮವಾಗಿದೆ. ಮರಳಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆದರೆ, ಮಕ್ಕಳ ಕಲಿಕೆಗೆ ಬೇಕಿರುವ ಪಠ್ಯಪುಸ್ತಕವೇ ಕೈ ಸೇರಿಲ್ಲ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟವೂ ಬೇಸರ ವ್ಯಕ್ತಪಡಿಸಿದೆ. ಪ್ರಸ್ತುತ ವರ್ಷದಲ್ಲಿ ಪರಿಷ್ಕೃತ ಪಠ್ಯಪುಸ್ತಕವು ಶಾಲೆಗಳಿಗೆ ಸರಬರಾಜು ಆಗಿಲ್ಲ. ಇದಕ್ಕೆ ಕಾರಣ ಪುಸ್ತಕ ಮುದ್ರಣ ಕಾರ್ಯ ಇನ್ನೂ ನಡೆಯುತ್ತಿದೆ ಎನ್ನುವುದು.
ರಷ್ಯಾ- ಉಕ್ರೇನ್ ನಡುವಿನ ಯುದ್ಧದಿಂದಾಗಿ ಮುದ್ರಣ ಕಾಗದ ಸಮಸ್ಯೆ ಎದುರಾಗಿದ್ಯಾ? ಕಚ್ಚಾ ಕಾಗದ ಸಿಗದ ಕಾರಣಕ್ಕೆ ಶೇ.40ಕ್ಕಿಂತಲೂ ಹೆಚ್ಚು ಪರಿಷ್ಕೃತ ಪಠ್ಯ ಪುಸ್ತಕ ಮುದ್ರಣ ಬಾಕಿ ಉಳಿದಿದ್ಯಾ? ಇಂತಹದೊಂದು ಚರ್ಚೆ ನಡೆಯುತ್ತಿದೆ. ಆದರೆ, ಇದೆಲ್ಲವನ್ನೂ ತಳ್ಳಿ ಹಾಕಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಸರ್ಕಾರ ಶಿಕ್ಷಣದಲ್ಲಿ ರಾಜಕೀಯ ಮಾಡಿಕೊಂಡು ಕೂರುವ ಬದಲು ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕ ನೀಡುವ ಕಡೆ ಗಮನ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ.
ಶಿಕ್ಷಣ ಇಲಾಖೆಯು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗದೇ ಇರುವುದೇ ಪಠ್ಯಪುಸ್ತಕ ಸರಿಯಾದ ಸಮಯಕ್ಕೆ ಮಕ್ಕಳ ಕೈ ಸೇರುತ್ತಿಲ್ಲ. ಮಕ್ಕಳ ಕೈಗೆ ಪಠ್ಯಪುಸ್ತಕ ಕೈ ಸೇರಲು ಹತ್ತು ದಿನ ಆಗುತ್ತೆ ಅಂತಾರೆ. ಆದರೆ, ಅದೆಲ್ಲ ಸುಳ್ಳು. ಪುಸ್ತಕ ತಲುಪಲು ಇನ್ನೂ ಮೂರು ತಿಂಗಳು ಬೇಕು. ಪೇಪರ್ ಸಿಗ್ತಿಲ್ಲ ಅನ್ನೋದೆಲ್ಲ ಕುಂಟು ನೆಪ. ಮಕ್ಕಳ ಭವಿಷ್ಯದೊಂದಿಗೆ ಅಧಿಕಾರಿಗಳು ಹಾಗೂ ಸರ್ಕಾರ ಆಟವಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಪಠ್ಯಪುಸ್ತಕ ಸರಬರಾಜು ಮಾಡದೇ ಇರುವುದು ನಿಜಕ್ಕೂ ಖಂಡನೀಯ. ಇವರು ನೀಡುವ ಸಬೂಬು ಅರ್ಥರಹಿತ. ಪ್ರತಿ ವರ್ಷವೂ ಖಾಸಗಿ ಶಿಕ್ಷಣ ಸಂಸ್ಥೆ, ಸರ್ಕಾರಿ ಶಾಲೆಯ ಮಕ್ಕಳಿಗೂ ಪುಸ್ತಕ ನೀಡುವುದರಲ್ಲಿ ಲೋಪವಾಗ್ತಿದೆ. ಅದನ್ನೇ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಿದ್ದಾರೆ. ಹೊಸ ಶಿಕ್ಷಣ ಸಚಿವರ ಸಾಧನೆ ಶೂನ್ಯವಾಗಿದ್ದು, ರಾಜಕೀಯ ಮಾಡಿಕೊಂಡು ಇದ್ದಾರೆಯೇ ವಿನಃ ಪಠ್ಯಪುಸ್ತಕ ತಯಾರಿಗೆ ಬೇಕಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದಾರೆ ಎಂದು ಆರೋಪಿಸಿದರು.
ಓದಿ: 21ನೇ ಶತಮಾನದಲ್ಲಿ ಜ್ಞಾನಕ್ಕೆ ಮಾತ್ರ ಮಹತ್ವವಿದೆ: ಸಿಎಂ ಬೊಮ್ಮಾಯಿ