ಬೆಂಗಳೂರು: ಬೇರೆ ರಾಜ್ಯಗಳು ಮತ್ತು ಅಂತರ್ ಜಿಲ್ಲೆಗಳ ಕಾರ್ಮಿಕರು ತಮ್ಮ ಊರಿಗೆ ಹೋಗಲು ಅವಕಾಶ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕು. ಅವರು ಅಪೇಕ್ಷೆ ಪಟ್ಟರೆ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿಕೊಡುತ್ತೇವೆ. ಒಮ್ಮೆ ಜಿಲ್ಲೆಯಿಂದ ಹೊರ ಹೋದರೆ ಮತ್ತೆ ಮರಳಿ ಬರುವಂತಿಲ್ಲ ಎಂದರು.
ಅಲ್ಲದೆ ಹೊರ ರಾಜ್ಯದ ವಿದ್ಯಾರ್ಥಿಗಳು ಅವರ ರಾಜ್ಯಕ್ಕೆ ತೆರಳಲು ಅವಕಾಶ ನೀಡಲಾಗುವುದು. ನಾಳೆಯಿಂದ ಈ ವಿನಾಯಿತಿ ಸಿಗಲಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಲಿದ್ದಾರೆ ಎಂದು ತಿಳಿಸಿದರು.
ಮದ್ಯದಂಗಡಿ ತೆರೆಯಲ್ಲ
ಎಲ್ಲಾ ಕಡೆ ಲಾಕ್ಡೌನ್ ಸಡಲಿಕೆಯಾಗುವವರೆಗೂ ಮದ್ಯದಂಗಡಿ ತೆರೆಯುವುದೇ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಮೇ 3ರವರೆಗೂ ಮದ್ಯದಂಗಡಿ ಹಾಗೂ ಸಲೂನ್ ಶಾಪ್ ತೆರೆಯಲು ಅವಕಾಶವಿಲ್ಲ ಎಂದು ಹೇಳಿದರು.
ರೆಡ್ ಝೋನ್ಗಳನ್ನು ಬಿಟ್ಟು ಬೇರೆ ಕಡೆ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ನೀಡಲು ಹಾಗೂ ಅಂತರ್ ಜಿಲ್ಲೆಗಳಲ್ಲಿ ಆಡಳಿತ ಮಂಡಳಿಯವರು ಹೋಗಿ ಬರಲು ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಉಳಿದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧರಿಸಿ ಮೇ 3ರ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ ಮಾಡಲು ಸಂಪುಟ ಸಭೆ ಸಮ್ಮತಿ ನೀಡಿದೆ. ಇದರಿಂದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ ಎಂದು ಹೇಳಿದರು.