ಬೆಂಗಳೂರು: ಸಮವಸ್ತ್ರ ಬೇಕೋ ಬೇಡವೊ ಅನ್ನೋದು ಪ್ರಶ್ನೆ. ಹಿಜಾಬ್ ಬೇಕೋ ಬೇಡವೊ ಎನ್ನೋದು ಪ್ರಶ್ನೆ ಅಲ್ಲ. ಹಿಜಾಬ್ ಮಾನಸಿಕ ಗುಲಾಮಗಿರಿ ಅನ್ನೋದನ್ನ ಅಂಬೇಡ್ಕರ್ ಹೇಳಿದ್ದರು. ಸಮವಸ್ತ್ರದ ಬಗ್ಗೆ ಬುದ್ಧಿ ಜೀವಿಗಳ ಅಭಿಪ್ರಾಯ ಏನು? ಬುದ್ಧಿ ಜೀವಿಗಳು ಯಾಕೆ ಸುಮ್ಮನೆ ಇದ್ದಾರೆ. ಅಂಬೇಡ್ಕರ್ ಅಭಿಪ್ರಾಯದ ಬಗ್ಗೆ ಬುದ್ಧಿ ಜೀವಿಗಳು ಏನು ಹೇಳುತ್ತಾರೆ. ಸಮವಸ್ತ್ರ ಈಗ ಬೇಕೋ ಬೇಡವೊ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬುದ್ಧಿ ಜೀವಿಗಳಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶ ಇದೆಯೇ? ಇಸ್ಲಾಂ ಮುಂದೆ ಇಟ್ಟುಕೊಂಡು ಹಿಜಾಬ್ ಹೆಣ್ಣುಮಕ್ಕಳ ಹಕ್ಕು ಎಂದು ಹೇಳುತ್ತಾ ಇದ್ದಾರೆ. ಅದೇ ಇಸ್ಲಾಂನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಇದೆಯಾ? ಇಸ್ಲಾಂನಲ್ಲಿ ಪುರುಷರಿಗೆ ಕೊಟ್ಟ ಸ್ವಾತಂತ್ರ್ಯ ಮಹಿಳೆಯರಿಗೆ ಕೊಡಲಾಗಿದೆಯೇ? ಕೊಟ್ಟಿದೆ ಅಂದರೆ ಸಂತೋಷ.
ಕೊಟ್ಟಿದ್ದರೆ ಯಾವ ಶಿಕ್ಷಣ? ಆಧುನಿಕ ಶಿಕ್ಷಣಕ್ಕೆ ಅವಕಾಶ ಇದೆಯಾ? ಕೊಟ್ಟಿಲ್ಲದೇ ಇದ್ದರೆ ಇಸ್ಲಾಂ ಹಿಡಿದುಕೊಂಡು ವಾದ ಮಾಡಬೇಕಾ? ಅಥವಾ ಸಂವಿಧಾನ ಹಿಡಿದುಕೊಂಡು ಆಡಳಿತ ಮಾಡಬೇಕಾ? ತಿಳಿದವರು ಈ ಬಗ್ಗೆ ಮಾತಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಇಸ್ಲಾಂ ಪ್ರಕಾರ, ಹೆಣ್ಣು ಮನೆಯಿಂದ ಹೊರಬರಬೇಕಾದರೆ ರಕ್ತ ಸಂಬಂಧಿಕರ ಹೊರತುಪಡಿಸಿ ಮನೆಯಿಂದ ಹೊರಗೆ ಬರುವಂತಿಲ್ಲ. ನನ್ನ ಮಾಹಿತಿ ಪ್ರಕಾರ, ಅವರು ಮನೆಯಿಂದ ಬೇರೆಯವರ ಜೊತೆ ಹೊರಬರುವಂತಿಲ್ಲ. ನಾವು ರಾಜ್ಯ ನಡೆಸೋದು ಇಸ್ಲಾಂ ಪ್ರಕಾರವೋ ಅಥವಾ ಸಂವಿಧಾನ ಪ್ರಕಾರವೋ? ಅದಕ್ಕೆ ತಾನೆ ಇಸ್ಲಾಂ ಹೆಸರಲ್ಲಿ ಆಫ್ಘಾನ್ ಶಾಲೆ ಬಂದ್ ಮಾಡಿದ್ದು. ಅದಕ್ಕೆ ತಾನೆ ಪಾಕಿಸ್ತಾನದಲ್ಲಿ ಗುಂಡು ಹಾರಿಸಿದ್ದು. ಈಗ ಬುದ್ಧಿ ಜೀವಿಗಳು ಮಾತಾಡಬೇಕು. ಸಮವಸ್ತ್ರ ಬೇಕೋ ಬೇಡವೋ ಅದನ್ನಾದರೂ ಹೇಳಿ ಎಂದರು.
ಇದನ್ನೂ ಓದಿ: ಶಿವಮೊಗ್ಗ ಯುವಕನ ಕೊಲೆ: ಇಬ್ಬರ ಬಂಧನ.. ಮೃತದೇಹ ಮೆರವಣಿಗೆ ವೇಳೆ ಬೆಂಕಿ ಹಚ್ಚಿ, ಕಲ್ಲು ತೂರಾಟ
ಸೆಕ್ಯುರಿಟಿ ವಿಚಾರ ಬಂದಾಗ ಬುರ್ಕಾ ಹಾಕಿಕೊಂಡು ಬಂದರೆ ಮುಖ ಹೇಗೆ ಕಾಣಿಸುತ್ತದೆ. ಸಿಸಿ ಟಿವಿ ಯಾಕೆ ಹಾಕಿದ್ದು? ಇದನ್ನು ಯಾರಾದರೂ ದುರುಪಯೋಗ ಪಡಿಸಿಕೊಳ್ಳಬಹುದು. ಮುಖ ಮರೆ ಮಾಚಿ ಬಾಂಬ್ ಹಾಕಿ ಹೋದರೆ ಕತೆ ಏನು? ಪತ್ತೆ ಹಚ್ಚೋದು ಹೇಗೆ? ಸೆಕ್ಯುರಿಟಿ ಥ್ರೆಟ್ ಬಂದಾಗ ಹನ್ನೊಂದಕ್ಕೂ ಹೆಚ್ಚು ದೇಶಗಳು ಬುರ್ಕಾ ನಿಷೇಧ ಮಾಡಿವೆ ಎಂದರು.
ಶಿವಮೊಗ್ಗದಲ್ಲಿ ಕಲ್ಲು ತೂರಾಟ, ಹಿಂಸಾಚಾರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ಸಿಎಂ, ಗೃಹ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಶಿವಮೊಗ್ಗದ ಯುವ ಸಮೂಹ ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು. ಆರೋಪಿಗಳನ್ನು ಶೀಘ್ರ ಬಂಧಿಸುವ ನಿಟ್ಟಿನಲ್ಲಿ ಸಿಎಂ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕಿದೆ ಎಂದರು.