ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನಾ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಿಪ್ರಾಯ ಪಟ್ಟರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೊಮ್ಮಾಯಿ ಅವರೇ ಮುಂದುವರೆಯಲಿದ್ದಾರೆ. ಊಹಾ ಪೋಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪೂರ್ಣಿಮಾ, ಅಶೋಕ್ ಹಾಗೂ ಎಲ್ಲರೂ ಸರ್ವಾನುಮತದಿಂದ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಗಿದೆ. ಮಾಧ್ಯಮದಲ್ಲಿ ಬೆಂಕಿ ಇಲ್ಲದೇ ಒಮ್ಮೊಮ್ಮೆ ಹೊಗೆ ಆಡಲಿದೆ ಎಂದರು.
ಯತ್ನಾಳ್ ಹೇಳಿಕೆಗೆ ಅವರೇ ಸ್ಪಷ್ಟನೆ ನೀಡಲಿ, ಅದು ಅವರಿಗೂ ಹಾಗೂ ಪಕ್ಷಕ್ಕೂ ಒಳಿತು. ಮೇಲಿರುವ ನಾಯಕತ್ವ ಹೇಗಿದೆ ಅಂತ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರಿಗೂ ಗೊತ್ತು. ಕಾರ್ಯಕರ್ಯರು ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದರು.
ಕಿಂಗ್ ಪಿನ್ ಬಗ್ಗೆ ಹೇಳಲಿ: ಇಷ್ಟು ಸಮಗ್ರ ತನಿಖೆ ನಡೆಸಿ, 20ಕ್ಕೂ ಹೆಚ್ಚು ಜನರ ಬಂಧನ ಆಗಿದೆ. 80ಕ್ಕೂ ಹೆಚ್ಚು ಜನರ ವಿಚಾರಣೆ ಆಗಿದೆ. ಹಿಂದೆ ಎಂದೂ ಆಗಿರಲಿಲ್ಲ. 2014ರಲ್ಲಿ ಚಿಕ್ಕಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ಎಸಿಪಿ ಒಬ್ಬರು ಅಂದು ನಡೆದ ಅಕ್ರಮದ ಬಗ್ಗೆ ದೂರು ನೀಡಿದ್ದರು. ಆದರೆ ತನಿಖೆಯೇ ನಡೆದಿಲ್ಲ. ಆದರೆ, ಈ ಬಾರಿ ವಿಚಾರಣೆ ಮಾಡಲು ಸಿಒಡಿಗೆ ನೀಡಲಾಗಿದೆ. ಅವರಿಗೆ ಸಿಒಡಿ ತನಿಖೆ ನಂಬಿಕೆ ಇಲ್ಲದಿದ್ದಲ್ಲಿ, ಹೈಕೋರ್ಟಿಗೆ ಹೋಗಿ ತಮ್ಮ ಬಳಿ ಈ ರೀತಿಯ ಸಾಕ್ಷಿಇದೆ ಅಂತ ದಾಖಲೆ ಕೊಡಲಿ. ಆಗ ಹೈಕೋರ್ಟ್ ಮೂಲಕವೇ ತನಿಖೆ ಆಗುತ್ತದೆ. ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಖರ್ಗೆ, ಎಚ್ಡಿಕೆ ಎಲ್ಲರೂ ದಾಖಲೆ ನೀಡಲಿ ಎಂದರು.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಿಎಂ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ಎಲ್ಲವೂ ಹೊರಗೆ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪಿತಸ್ತರಿಗೆ ಶಿಕ್ಷೆ ಆಗಲಿದೆ ಎಂದರು.
ಬಿಜೆಪಿ 150 ಸೀಟ್ ಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ: ಕಾಂಗ್ರೆಸ್ ಸಹ 150 ಸ್ಥಾನ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದೆ. ಅವರ ಟ್ರಾಕ್ ರೆಕಾರ್ಡ್ ತೆಗೆದುನೋಡಿ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಎಲ್ಲಿ ಪ್ರಚಾರ ಮಾಡ್ತಾರೋ, ಅಲ್ಲಿ ಸೋಲಿಸ್ತಾರೆ. ಸಿದ್ದರಾಮಯ್ಯ ಮತ್ತೆ ನಾನೇ ಮುಖ್ಯಮಂತ್ರಿ ಅಂತ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತರು. ಬಾದಾಮಿಯಲ್ಲಿ ಕಷ್ಟಪಟ್ಟು ಗೆದ್ದರು. 150 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕೂಡ ಪಡೆಯಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ : ಸಿಎಂ