ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ಆದರೆ, ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ ಎಂದು ಕಿಡಿ ಕಾರಿದ್ದಾರೆ.
ಇದೇ ವಿಷಯ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಕೂಡ ಉಪಚುನಾವಣೆ ದಿನಾಂಕ ಮರುನಿಗದಿಗೊಳಿಸಿದ ಚುನಾವಣಾ ಆಯೋಗದ ಬಗ್ಗೆ ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. 'ಈಗ ಚುನಾವಣಾ ಅಯೋಗ ಸರ್ಕಾರದ ಮತ್ತೊಂದು ಇಲಾಖೆಯಂತೆ ವರ್ತಿಸುತ್ತಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಚುನಾವಣೆಯನ್ನು ಮುಂದೂಡಿರುವುದು ಅಸಹಜವಾಗಿದೆ. ಇದೀಗ ಹೊಸ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಿರುವುದು ಅನರ್ಹರನ್ನು ಶುದ್ಧಗೊಳಿಸುವ ಪ್ರಯತ್ನದಂತೆ ಕಾಣುತ್ತಿದೆ' ಎಂದು ಆರೋಪಿಸಿದ್ದಾರೆ.