ಬೆಂಗಳೂರು: ಉಪಸಮರದ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಪಡೆ ಗೆಲುವಿನ ನಗೆ ಬೀರಿದ್ದು, ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂಬ ಮುನ್ಸೂಚನೆ ನೀಡಿದೆ.
ನ.10ಕ್ಕೆ ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ. ಇತ್ತ ಮೂರು ಪಕ್ಷಗಳ ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಾಗಿದೆ. ಈ ಮಧ್ಯೆ ಸಿ-ವೋಟರ್ ಸಮೀಕ್ಷೆ ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಭವಿಷ್ಯ ನುಡಿದಿದೆ.
ಸಿ-ವೋಟರ್ ಸಮೀಕ್ಷೆ ಪ್ರಕಾರ ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಗೌಡ ಗೆಲುವಿನ ನಗೆ ಬೀರಲಿದ್ದಾರೆ. ಉಪಸಮರದಲ್ಲಿ ಬಿಜೆಪಿಗೆ ಮತದಾರರು ಮಣೆ ಹಾಕಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶೂನ್ಯ ಸಂಪಾದನೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಆರ್.ಆರ್.ನಗರ ಸಮೀಕ್ಷೆ ಏನು?
ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂರನೇ ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಭಾರಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಮುನಿರತ್ನ 37.8% ಮತಗಳಿಸಿ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 31.1% ಮತಗಳಿಕೆ ಮಾಡಿ ಸೋಲಿನ ರುಚಿ ಕಾಣಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೇವಲ 14% ಮತಗಳಿಸಿದರೆ, ಇತರರು 17.2% ಮತ ಗಳಿಕೆ ಮಾಡಲಿದ್ದಾರೆ ಎಂದು ತಿಳಿಸಿದೆ.
ಶಿರಾದಲ್ಲೂ ಬಿಜೆಪಿಗೇ ಮಣೆ
ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಭದ್ರ ಕೋಟೆಯಾಗಿದ್ದ ಶಿರಾ ಕ್ಷೇತ್ರದಲ್ಲೂ ಈ ಬಾರಿ ಮೊದಲ ಬಾರಿಗೆ ಕಮಲ ಅರಳಲಿದೆ ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ.
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರರನ್ನು ಸೋಲಿಸಿ, ಪ್ರಪ್ರಥಮ ಬಾರಿಗೆ ಕಮಲ ಅರಳಿಸಲಿದ್ದಾರೆ. ಆ ಮೂಲಕ ಕಾಂಗ್ರೆಸ್ ಹಾಗೂ ಅನುಕಂಪದ ಅಲೆಯ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಗೆ ಸೋಲಿನ ಆಘಾತ ನೀಡಲಿದೆ ಎಂದು ತಿಳಿಸಿದೆ.
ಸಮೀಕ್ಷೆ ಹೇಳುವಂತೆ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 36.6% ಮತ ಗಳಿಕೆ ಮಾಡಲಿದ್ದಾರೆ ಎಂದು ತಿಳಿಸಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 32.5% ಮತಗಳಿಸಿ ಸೋಲು ಕಾಣಲಿದ್ದಾರೆ. ಇತ್ತ ಅನುಕಂಪದ ಅಲೆಯ ನಿರೀಕ್ಷೆಯಲ್ಲಿರುವ ಜೆಡಿಎಸ್ ನ ಅಮ್ಮಾಜಮ್ಮ ಕೇವಲ 17.4% ಮತಗಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇತರರು 13.5% ಮತಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.