ಬೆಂಗಳೂರು : ಕೊರೊನಾ ವೈರಸ್ ಬಿರುಗಾಳಿ ವ್ಯಾಪಾರ ಉದ್ಯಮಕ್ಕೆ ಹೊಡೆತ ಕೊಟ್ಟಿರೋದು ಅಷ್ಟಿಷ್ಟಲ್ಲ. ಕೋವಿಡ್ನಿಂದ ನೆಲಮಟ್ಟಕ್ಕೆ ಕುಸಿದಿದ್ದ ಸಣ್ಣಪುಟ್ಟ ವ್ಯಾಪಾರಿಗಳು, ಮತ್ತೆ ಮೇಲೇಳಲು ಹರಸಾಹಸ ಪಡ್ತಿದ್ದಾರೆ. ಕೆಲವೆಡೆ ವ್ಯಾಪಾರ-ವಹಿವಾಟು ಕ್ರಮೇಣ ಯಥಾಸ್ಥಿತಿಗೆ ಮರಳುತ್ತಿದೆ. ಆದರೆ, ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳ ವ್ಯಾಪಾರ ಪರವಾನಗಿ ನವೀಕರಣ ಅಥವಾ ಹೊಸ ಪರವಾನಿಗೆಗಾಗಿ ಮುಂದೆ ಬರದಿರುವುದು ಸರ್ಕಾರಕ್ಕೆ ತಲೆನೋವಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿ ದೊಡ್ಡ ನಷ್ಟ ಉಂಟಾಗಲಿದೆ.
ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಜೀವನ ನಡೆಸಲೂ ಸಾಧ್ಯವಾಗದ ರೀತಿ ಕೊರೊನಾ ಪೆಟ್ಟು ಕೊಟ್ಟಿದೆ. ವ್ಯಾಪಾರ, ವಹಿವಾಟು ಚೇತರಿಸಿಕೊಳ್ಳದ ಕಾರಣ ಸಾವಿರಾರು ವಾಣಿಜ್ಯ ಮಳಿಗೆಗಳು ಲಾಕ್‍ಔಟ್ ಆಗಿವೆ. ಅತ್ತ ಉದ್ಯೋಗ ಕಳೆದುಕೊಂಡ ಹಲವು ಕಾರ್ಮಿಕರು ಈಗ ಕೆಲಸಕ್ಕಾಗಿ ಅಲೆದಾಡುತ್ತಿದ್ರೆ, ಇತ್ತ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ವ್ಯಾಪಾರಿಗಳು ತಮ್ಮ ವ್ಯಾಪಾರ ಪರವಾನಗಿಗಳನ್ನು ನವೀಕರಿಸಲು ಮತ್ತು ಹೊಸ ಪರವಾನಿಗೆಗೋಸ್ಕರ ಅರ್ಜಿ ಸಲ್ಲಿಸುವ ಪ್ರಮಾಣ ಗಣನೀಯವಾಗಿ ಕುಸಿದಿದೆ.
ಹೋಟೆಲ್, ಜವಳಿ, ಆಟೋಮೊಬೈಲ್, ಕಿರಾಣಿ, ಜನರಲ್ ಸ್ಟೋರ್ಸ್, ವಿದ್ಯುತ್ ಉಪಕರಣ, ಸಿಮೆಂಟ್ ಅಂಗಡಿ, ಮೊಬೈಲ್, ಮೊಬೈಲ್ ಬಿಡಿಭಾಗಗಳ ಶಾಪ್,ಪುಸ್ತಕ-ನೋಟ್‍ಬುಕ್ ಮಾರಾಟ ಮಳಿಗೆ, ಜೆರಾಕ್ಸ್ ಅಂಗಡಿ ಸೇರಿ ರಾಜ್ಯದಲ್ಲಿ ಲಕ್ಷಾಂತರ ಅಂಗಡಿಗಳು ಮುಚ್ಚಿವೆ. ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಸೇರಿ ರಾಜ್ಯದ ಕೆಲವೆಡೆ ವಿವಿಧ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ವ್ಯಾಪಾರಸ್ಥರು ನಷ್ಟದಲ್ಲಿದ್ದು, ಮತ್ತೆ ವ್ಯಾಪಾರ ನಡೆಸಲು ಆಸಕ್ತಿ ತೋರುತ್ತಿಲ್ಲ.
ಬೆಳಗಾವಿ ವಿಷಯಕ್ಕೆ ಬಂದ್ರೆ ಕಳೆದ ವರ್ಷದವರೆಗಿನ ಮಾಹಿತಿ ಪ್ರಕಾರ 2,315 ವ್ಯಾಪಾರಿಗಳು ವ್ಯಾಪಾರ ಪರವಾನಿಗೆ ನವೀಕರಿಸಿಕೊಂಡಿದ್ದರು. ವಿಪರ್ಯಾಸವೆಂದರೆ ಪ್ರಸಕ್ತ ವರ್ಷ ಪರವಾನಿಗೆ ನವೀಕರಿಸಿಕೊಂಡವ್ರು 340 ಮಂದಿ ಮಾತ್ರ. 1,975 ವ್ಯಾಪಾರಸ್ಥರು ಪರವಾನಿಗೆ ನವೀಕರಿಸಿಕೊಂಡಿಲ್ಲ. ಹೀಗಾಗಿ, ಪಾಲಿಕೆಗೆ ಪ್ರತಿ ವರ್ಷ 1.20 ಕೋಟಿ ರೂಪಾಯಿ ಆದಾಯದಲ್ಲಿ ಬಂದಿತ್ತು. ಈ ವರ್ಷ 1,975 ಅಂಗಡಿಗಳು ಮುಚ್ಚಿರುವ ಕಾರಣ ಪಾಲಿಕೆಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.
ಟ್ರೇಡ್ ಲೈಸನ್ಸ್ ನವೀಕರಣ ಹಾಗೂ ಹೊಸ ಅಂಗಡಿಗಳ ಪರವಾನಿಗೆ ಮಾಡಿಸಿಕೊಳ್ಳಿ ಎಂದು ವ್ಯಾಪಾರಿಗಳ ಬಳಿಗೇ ಕಲಬುರಗಿ ಪಾಲಿಕೆ ಅಧಿಕಾರಿಗಳೇ ಹೋಗುವಂತೆ ಮಾಡಿದೆ. ಇಲ್ಲಿ 16 ಸಾವಿರ ಮಳಿಗೆಗಳ ಪೈಕಿ ಶೇ.50ರಷ್ಟು ಮಂದಿ ಪರವಾನಿಗೆ ಪಡೆದಿಲ್ಲ. ರಾಜ್ಯದ ಅತಿ ದೊಡ್ಡ ಪಾಲಿಕೆಗಳಲ್ಲಿ ಒಂದಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಪ್ರತಿವರ್ಷ 4 ನಾಲ್ಕು ಕೋಟಿ ಹಣ ಸಂದಾಯವಾಗುತ್ತಿದ್ದ ಪಾಲಿಕೆಗೆ ಕೊರೊನಾ ಕಾರಣ ನಿರೀಕ್ಷಿತ ಬಾಡಿಗೆ ಹಣ ಸಂದಾಯವಾಗಿಲ್ಲ. ವ್ಯಾಪಾರ,ವಹಿವಾಟು ಮೊದಲಿನಂತೆ ಸಕ್ರಿಯವಾದ್ರೆ ಸರ್ಕಾರದ ಬೊಕ್ಕಸವೂ ತುಂಬಲಿದೆ. ಇಲ್ಲವಾದ್ರೆ ತೀವ್ರ ಪ್ರಮಾಣದ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಮಾತು ಕೇಳಿ ಬರುತ್ತಿವೆ.