ಬೆಂಗಳೂರು: ಆಸ್ತಿ ವಿಷಯಕ್ಕೆ ಉದ್ಯಮಿ ಪ್ರಭಾಕರ್ ರೆಡ್ಡಿಯನ್ನ ಪ್ರೇಯಸಿಯೇ ಕೊಲೆ ಮಾಡಲು ಯತ್ನಿಸಿದ ಪ್ರಕರಣ ಸಂಬಂಧ ಆಗ್ನೇಯ ವಿಭಾಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಳೆದ ಶುಕ್ರವಾರ ನೈಸ್ ರೋಡ್ನಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಉದ್ಯಮಿ ಪ್ರಭಾಕರ್ ರೆಡ್ಡಿ ಹೊರಟಿದ್ದಾಗ ಪ್ರೇಯಸಿ ಪವಿತ್ರಾ ಆಸ್ತಿ ವಿಚಾರಕ್ಕೆ ತಕಾರರು ತೆಗೆದು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು, ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಪ್ರಭಾಕರ್ ದೂರು ನೀಡಿ, ಪ್ರಕರಣ ದಾಖಲಿಸಿದ್ದನು.
ಪ್ರಕರಣ ಹಿನ್ನೆಲೆ:
ಪ್ರಭಾಕರ್ ರೆಡ್ಡಿ ಹಾಗೂ ಪವಿತ್ರಾ ಕೆಲ ವರ್ಷಗಳ ಹಿಂದೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ರು. ಇವರ ಮಧ್ಯೆ ಬಿರುಕು ಮೂಡಿದ ಕಾರಣ, ಬೇರೆಯಾಗಿ ವಾಸವಾಗಿದ್ದರು. ಮೂರು ವರ್ಷಗಳ ಬಳಿಕ ಮತ್ತೆ ಒಂದಾಗಲು ಬಯಸಿದ ಪವಿತ್ರಾ, ನಿಮ್ಮ ಜೊತೆ ಮಾತನಾಡಬೇಕೆಂದು ಪ್ರಭಾಕರ್ ರೆಡ್ಡಿಯನ್ನ ಕರೆದಿದ್ದಳು. ಪವಿತ್ರಾಳನ್ನ ನಂಬಿ ಪ್ರಭಾಕರ್, ತನ್ನ ಕಾರಿನಲ್ಲಿ ಆಕೆಯನ್ನ ಕೂರಿಸಿಕೊಂಡು ನೈಸ್ ರೋಡ್ನಲ್ಲಿ ಜೊತೆಯಾಗಿ ಹೋಗ್ತಿದ್ದ ವೇಳೆ ಆಸ್ತಿ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಹಿಸುವಂತೆ ಪವಿತ್ರಾ ಬೆದರಿಕೆಯೊಡ್ಡಿದ್ದಳು. ಆದ್ರೆ ಪ್ರಭಾಕರ್ ಇದಕ್ಕೆ ಒಪ್ಪದೆ ಜಗಳ ತಾರಕಕ್ಕೇರಿದ್ದು, ಪವಿತ್ರಾ ಕೊಲೆ ಮಾಡಲು ಯತ್ನಿಸಿದ್ದಾಳೆ. ಅಲ್ಲದೇ ಈ ಹಿಂದೆ ಆರ್ ಆರ್ ನಗರದಲ್ಲಿ ಪವಿತ್ರಾಗೆ ಐಷಾರಾಮಿ ಮನೆಯನ್ನ ಕಟ್ಟಿಸಿಕೊಟ್ಟಿದ್ದು, ಓಡಾಡಲು ಕಾರನ್ನ ಕೂಡ ಪ್ರಭಾಕರ್ ರೆಡ್ಡಿ ಕೊಡಿಸಿದ್ದನು.
ಇನ್ನು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಹಲವಾರು ಅವ್ಯಹಾರ ಮಾಡುತ್ತಿದ್ದ ಕಾರಣ ಇತ್ತೀಚೆಗೆ ಪ್ರಭಾಕರ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿ, ಬರೋಬ್ಬರಿ 300 ಕೋಟಿಗೂ ಅಧಿಕ ರೂಪಾಯಿಗಳ ದಾಖಲೆ ವಶಕ್ಕೆ ಪಡೆದಿದ್ದರು.
ಪ್ರಕರಣ ಸಂಬಂಧ ಮಾತನಾಡಿದ ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂತ್, ಪ್ರಭಾಕರ್ ರೆಡ್ಡಿ ತನ್ನ ಪ್ರೇಯಸಿ ಪವಿತ್ರಾ ಜೊತೆ ಕಾರಿನಲ್ಲಿ ತೆರಳುವವಾಗ ಆಕೆ ಕೊಲೆ ಯತ್ನ ನಡೆಸಿದ್ದಾಳೆಂದು ಸೆ.20 ರಂದು ದೂರು ನೀಡಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದಿದ್ದಾರೆ.