ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಮಾತನಾಡಿದ ಅವರು, ಬಸ್ ಟಿಕೆಟ್ ದರ ಪರಿಷ್ಕರಣೆ ವಿಚಾರ ನಮ್ಮ ಮುಂದಿಲ್ಲ, ನಾನು ಈಗ ತಾನೇ ಸಾರಿಗೆ ಸಚಿವನಾಗಿ ಬಂದಿದ್ದೇನೆ. ಗುರುವಾರ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ, ಬಳಿಕ ಅಂತಿಮವಾಗಿ ಸಿಎಂ ಜೊತೆ ಚರ್ಚಿಸಿ ಟಿಕೆಟ್ ದರ ಪರಿಷ್ಕರಣೆ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ಹೋಗುವವರಿಗೆ ಹೆಚ್ಚುವರಿ ಬಸ್, ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದ್ದೇವೆ. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಹಬ್ಬಕ್ಕೆ ಟಿಕೆಟ್ ದರ ಅಷ್ಟೇನೂ ಹೆಚ್ಚಿಸಿಲ್ಲ, ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಳಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಅದ್ಧೂರಿ ಪೂಜೆಗೆ ಸ್ಪಷ್ಟನೆ:
ಅದ್ಧೂರಿ ಏನು ಮಾಡಿದ್ದೀವಿ ? 150 ಜನ ಕಾರ್ಯಕರ್ತರು ಬಂದಿದ್ರು, ಅವರಿಗೆ ಊಟ-ಉಪಹಾರ ಕೊಟ್ಟಿದ್ದೀವಿ ಅಷ್ಟೇ. ಪೂಜೆ ಮಾಡಿದ್ದೀವಿ ಅಷ್ಟೇ. ನಾನೂ ಪ್ರವಾಹ ಪೀಡಿತ ಪ್ರದೇಶದಿಂದಲೇ ಬಂದವನು, ನಾನು ಬೇರೆಯವರಿಂದ ಉಪದೇಶ ಮಾಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಲಕ್ಷ್ಮಣ ಸವದಿ ವಿಧಾನಸೌಧದಲ್ಲಿನ ಪೂಜೆಯ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.