ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬುರೆವಿ ಚಂಡಮಾರುತ ಉಂಟಾಗಿದೆ. ಪ್ರತೀ ಗಂಟೆಗೆ 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಡಿಸೆಂಬರ್ 3ರ ರಾತ್ರಿ ಅಥವಾ ಡಿಸೆಂಬರ್ 4ರ ಬೆಳಿಗ್ಗೆ ತಮಿಳುನಾಡು ಮತ್ತು ಕನ್ಯಾಕುಮಾರಿಗೆ ಸೈಕ್ಲೋನ್ ಎಫೆಕ್ಟ್ ತಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಇಂದಿನಿಂದ ಡಿ.5 ರವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಓದಿ: ಬುರೆವಿ ಚಂಡಮಾರುತದ ಎಫೆಕ್ಟ್: ಬೆಂಗಳೂರಲ್ಲಿ ತುಂತುರು ಮಳೆ
ಡಿ.6 ಮತ್ತು 7ರಂದು ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಕರಾವಳಿ ಪ್ರದೇಶದಲ್ಲಿ ಇಂದಿನಿಂದ ಡಿ. 6 ರವರೆಗೆ ಮಳೆಯಾಗುವ ಸಂಭವವಿದೆ. ಇಂದು ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದ್ದು, ಉತ್ತರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ.
ಬೀದರ್ನಲ್ಲಿ ಕನಿಷ್ಠ ಉಷ್ಣಾಂಶ 9.4 ಡಿಗ್ರಿ, ದಾವಣಗೆರೆಯಲ್ಲಿ 11.3 ಡಿಗ್ರಿ, ವಿಜಯಪುರದಲ್ಲಿ 12 ಡಿಗ್ರಿ, ಧಾರವಾಡದಲ್ಲಿ 13.5 ಡಿಗ್ರಿ, ಬೆಂಗಳೂರಿನಲ್ಲಿ 18 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.