ಬೆಂಗಳೂರು: ಇಲಾಖೆಯ ಅನುದಾನ ಹಂಚಿಕೆ ಹಾಗು ಕೆಲವು ಆಡಳಿತಾತ್ಮಕ ವಿಷಯಗಳ ಕುರಿತು ಸಚಿವ ಕೆ.ಎಸ್ ಈಶ್ವರಪ್ಪ ಮಾಡಿರುವ ಆರೋಪದ ಕುರಿತು ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಸಿಎಂ ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದರು. ಈ ಕುರಿತು ಮಾಧ್ಯಮದವರು ಕೇಳಿದೆ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಿಎಸ್ವೈ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಾನು ಯಾವುದೇ ಟೀಕೆ ಟಿಪ್ಪಣಿ ಮಾಡಲ್ಲ. ಆವತ್ತೂ ಇದರ ಬಗ್ಗೆ ಮಾತಾಡಲಿಲ್ಲ, ಇವತ್ತೂ ಮಾತನಾಡಲ್ಲ. ಒಂದೇ ಒಂದು ಶಬ್ಧ ಕೂಡ ಇದರ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಹೊರಟು ಹೋದರು.
ದಾವಣಗೆರೆಗೆ ಹೊರಟ ಸಿಎಂ:
ಕಾಗಿನೆಲೆ ಮಹಾಸಂಸ್ಥಾನದ ಬೆಳ್ಳೂಡಿ ಶಾಖಾ ಮಠದ 5 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ತೆರಳಿದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಬೈರತಿ ಬಸವರಾಜ್ ಸಿಎಂಗೆ ಸಾಥ್ ನೀಡಿದರು.