ಬೆಂಗಳೂರು: ಭವಿಷ್ಯದ ಕನಸು ಕಂಡಿದ್ದ ಆ ಯುವಕನಿಗೆ ಅಪಘಾತದಿಂದ ದುರದೃಷ್ಟವಶಾತ್ ಮೆದುಳು ನಿಷ್ಕ್ರಿಯಗೊಂಡಿತ್ತು. 19 ವರ್ಷದ ಮಹೇಶ್ (ಹೆಸರು ಬದಲಿಸಲಾಗಿದೆ) ಮನೆ ಮಹಡಿಯಿಂದ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ, ಆದರೆ ಆಗಸ್ಟ್ 27 ರಂದು ಬ್ರೈನ್ ಡೆಡ್ ಆಗಿತ್ತು. ತಕ್ಷಣ ಅವರ ಕುಟುಂಬವು ಅವನ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದು, ಮತ್ತೊಬ್ಬ ರೋಗಿಯ ಜೀವ ಉಳಿಸಲು ಸಹಾಯ ಮಾಡಿತು. ಯುವಕನ ಯಕೃತ್ತನ್ನು ( ಲಿವರ್) ದಾನ ಮಾಡುವ ಮೂಲಕ ಮತ್ತೊಬ್ಬ ರೋಗಿ ಮರುಜನ್ಮ ಪಡೆದಿದ್ದಾನೆ.
ಕಲಬುರಗಿ ಚಿರಾಯು ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಟರ್ ಆರ್ವಿ ಆಸ್ಪತ್ರೆಗೆ ಅಂಗಾಂಗವನ್ನು ತ್ವರಿತವಾಗಿ ವರ್ಗಾಯಿಸಲು ಎರಡು ಹಸಿರು ಕಾರಿಡಾರ್‌ಗಳನ್ನು ಸಮರ್ಥವಾಗಿ ಆಯೋಜಿಸಲಾಯಿತು. ಅಂಗಾಂಗ ಮರುಪಡೆಯುವಿಕೆಯ ಪ್ರಕ್ರಿಯೆಯನ್ನು 2.5 ಗಂಟೆಗಳ ಅವಧಿಯಲ್ಲಿ ನಡೆಸಲಾಯಿತು.
ಅಂಗಾಂಗವನ್ನು ಆಸ್ಪತ್ರೆಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಸಾಗಿಸಲು ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಯಿತು. ಬಳಿಕ ಮತ್ತೊಂದು ಹಸಿರು ಕಾರಿಡಾರ್ ವ್ಯವಸ್ಥೆಯನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಆಸ್ಟರ್ ಆರ್ವಿ ಆಸ್ಪತ್ರೆಗೆ ಮಾಡಲಾಯಿತು ಎಂದು ಆಸ್ಪತ್ರೆಯ ಸಿಒಒ ಡಾ ಪ್ರಶಾಂತ್ ತಿಳಿಸಿದರು.
ಡಾ. ರಾಜೀವ್ ಲೋಚನ್ ನೇತೃತ್ವದ ಆಸ್ಟರ್ ಆರ್ವಿ ಆಸ್ಪತ್ರೆಯ ಅಂಗಾಂಗ ಕಸಿ ತಂಡವು ರೋಗಿಯ ಮೇಲೆ ಅಂಗಾಂಗ ಕಸಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಶವದ ಅಂಗಾಂಗ ದಾನವನ್ನು ಜೀವಸಾರ್ಥಕಥೆಯ ಸಹಯೋಗದಲ್ಲಿ ನಡೆಸಲಾಯಿತು. ಜೀವಸಾರ್ಥಕತೆಯು ಅಂಗಾಂಗ ದಾನಕ್ಕೆ ಅನುಕೂಲ ಕಲ್ಪಿಸುವ ರಾಜ್ಯದ ನೋಡಲ್ ಸಂಸ್ಥೆಯಾಗಿದೆ.