ಯಲಹಂಕ(ಬೆಂಗಳೂರು): ಪೋಷಕರು ಓದಿಕೊಳ್ಳುವಂತೆ ಹೇಳಿದಕ್ಕೆ 13 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ಓಡಿ ಹೋಗಿದ್ದ(Boy who ran away from home). ಆತ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ತಂದೆಯ ಮೊಬೈಲ್ ಬಾಲಕನ ಪತ್ತೆಗೆ ನೆರವಾಗಿದೆ.
ಯಲಹಂಕ ತಾಲೂಕಿನ ಮಾರಸಂದ್ರ ಬಳಿಯ ಟೋಲ್ ಬಳಿ ವಾಸವಾಗಿದ್ದ ರಾಣ ಬಹದ್ದೂರ್ ಅವರ ಪುತ್ರ ಪುನೀತ್ ಮನೆಯಿಂದ ಓಡಿ ಹೋಗಿದ್ದ. ತಂದೆ ತಾಯಿ ಪದೇ ಪದೆ ಓದಿಕೊಳ್ಳುವಂತೆ ಹೇಳುತ್ತಿದ್ದರಂತೆ. ಇದೇ ಕಾರಣಕ್ಕೆ ಬಾಲಕ ಮನೆ ಬಿಟ್ಟು ಹೋಗಿದ್ದನಂತೆ. ಆತ ಮನೆಯಿಂದ ಹೋಗುವ ಮುನ್ನ ಜತೆಯಲ್ಲಿ ತನ್ನ ತಂದೆಯ ಮೊಬೈಲ್ ತೆಗೆದುಕೊಂಡು ಹೋಗಿದ್ದ.
ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಾಲಕನ ಪತ್ತೆಗಾಗಿ ಬೆನ್ನಟ್ಟಿದ್ದ ಪೊಲೀಸರಿಗೆ ನಾಪತ್ತೆಯಾದ ಮೊದಲ ದಿನ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ. ಬಾಲಕನ ಜತೆಯಲ್ಲಿದ್ದ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿತ್ತು.
ಮಾರನೇ ದಿನ ಬಾಲಕ ಮೊಬೈಲ್ ಆನ್ ಮಾಡಿ ತಕ್ಷಣವೇ ಆಫ್ ಮಾಡಿದ. ಕಾಲ್ ಡೀಟೇಲ್ಸ್ ಲೊಕೇಶನ್(Call Details location) ಬೆನ್ನಟ್ಟಿದ್ದ ಪೊಲೀಸರಿಗೆ ಬಾಲಕ ಚಿಕ್ಕಜಾಲದಲ್ಲಿರುವ ಸುಳಿವು ಸಿಕ್ಕಿದೆ. ಚಿಕ್ಕಜಾಲಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾಗ ಕಾಣೆಯಾಗಿದ್ದ ಬಾಲಕ ಹೋಟೆಲ್ನಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಬಾಲಕನನ್ನ ಪೋಷಕರ ವಶಕ್ಕೆ ನೀಡಲಾಗಿದೆ.
ಇದನ್ನೂ ಓದಿ: ಪ್ರೇಮ ಪ್ರಕರಣ: ಯುವಕನನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಯುವತಿ ಸಂಬಂಧಿಕರು