ಬೆಂಗಳೂರು: ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸುವ ಸೂಕ್ತ ವೇದಿಕೆಗಳ ಕೊರತೆ ಕಾಡದಿರುವುದು ಕನ್ನಡ ಭಾಷಾ ಸಾಹಿತ್ಯದ ಹಿರಿಮೆ ಮೇಲ್ಮಟ್ಟದಲ್ಲಿ ಉಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಮೈತ್ರಿ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಐದು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಉತ್ತಮ ಲೇಖಕರು, ಬರಹಗಾರರನ್ನು ಪೋಷಿಸುವ ವ್ಯವಸ್ಥೆ ಅಚ್ಚುಕಟ್ಟಾಗಿಯೇ ಸಾಗಿದೆ. ಇಂದಿಗೂ ಬರಹಗಾರರು, ಸಾಹಿತಿಗಳು, ಲೇಖಕರನ್ನು ಪೋಷಿಸುವ ಪ್ರಕಾಶಕರು ಮತ್ತು ಮುದ್ರಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬರಹಗಾರರ ಕೃತಿಯನ್ನು ಜನರಿಗೆ ಅತ್ಯಂತ ವ್ಯವಸ್ಥಿತವಾಗಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಸಾಹಿತ್ಯ ಪ್ರಪಂಚ ಉತ್ತಮ ಪ್ರಗತಿ ಸಾಧಿಸಿದ್ದರೆ ಅದಕ್ಕೆ ಕಾರಣ ಲೇಖಕರಿಗೆ ಸಕಾಲಕ್ಕೆ ಸಿಕ್ಕ ಪ್ರೋತ್ಸಾಹವೇ ಆಗಿದೆ ಎಂದರು.
ನಮ್ಮ ಬರಹ ಒಂದು ವ್ಯಕ್ತಿ, ಕುಟುಂಬ ಇಷ್ಟಪಡುತ್ತದೆ ಎಂಬ ಕಾರಣಕ್ಕೆ ಲೇಖಕರಾಗಿದ್ದಕ್ಕೆ ತೃಪ್ತಿಯಿದೆ. ಸಾಹಿತ್ಯ ಕ್ಷೇತ್ರ ಮುಗಿಯಿತು ಅನ್ನುವ ಆತಂಕ ಬೇಡ. ಪ್ರತಿಭೆಗಳು, ಪೋಷಕರು ತುಂಬಾ ಮಂದಿ ಇದ್ದಾರೆ. ನಾನು ಸರ್ವಶ್ರೇಷ್ಠ ಎಂಬ ಭಾವನೆ ಲೇಖಕರ ದೃಷ್ಟಿಯಲ್ಲಿ ಬರಬಾರದು, ಬಂದರೆ ಬೆಳವಣಿಗೆ ನಿಲ್ಲಲಿದೆ.
ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಸಹಕಾರಿಯಾಗುವ ಕಾರ್ಯ ಮಾಡಬೇಕು. ನಿರ್ಭಯವಾದ ವಾತಾವರಣವನ್ನು ಸಾಹಿತ್ಯ ಮಾತ್ರ ಕೊಡಲು ಸಾಧ್ಯ. ಸಂಸ್ಕೃತಿಗಳನ್ನು ಉಳಿಸಿಕೊಳ್ಳುವುದು ಕೇವಲ ಹೆಣ್ಣಿಗೆ ಸೀಮಿತವಾಗಿಲ್ಲ, ಎಲ್ಲರಿಗೂ ಸಂಬಂಧಿಸಿದ್ದು. ಇಲ್ಲಿ ಗಂಡು, ಹೆಣ್ಣೆಂಬ ಬೇಧವಿಲ್ಲ. ಸಂಸ್ಕಾರ ಸುಪ್ತವಾದ ಮನಸ್ಸಿನಲ್ಲಿ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.
ಹಿರಿಯ ಸಾಹಿತಿ, ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಪಿಸುಮಾತಿನ ಮೂಲಕ ಮಾಡುವ ಬದಲಾವಣೆ ಗಟ್ಟಿಯಾದ ಘೋಷಣೆಯಲ್ಲಿ ಇರಲ್ಲ. ಪಿಸುಮಾತಿನಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡುವ ಶಕ್ತಿ ಇರುತ್ತದೆ. ಪಿಸುಮಾತಿಗೆ ಕೆಂಡವನ್ನು ಉಗುಳುವ ಶಕ್ತಿ ಇರುತ್ತದೆ. ತಾಯಂದಿರು ಎಷ್ಟೇ ನೋವುಂಡಿದ್ದರೂ, ಅದನ್ನು ಹೊರಗೆ ತೋರಿಸುವುದಿಲ್ಲ. ಅಂತಹ ಪಾತ್ರಗಳ ಪರಿಚಯ ಇಂದಿನ ಕೃತಿಯಲ್ಲಿದೆ. ಐದು ಕೃತಿಗಳೂ ಪುಟ್ಟಪುಟ್ಟ ದನಿಯನ್ನು ನೀಡಿವೆ. ಇಂದು ಹಾಗೂ ಮುಂದಿನ ದಿನಗಳಲ್ಲಿ ದೊಡ್ಡ ದನಿಯಾಗಲಿದೆ ಎಂದರು.
ಇದನ್ನೂ ಓದಿ: ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆದ ಸಚಿವ ಶ್ರೀಮಂತ ಪಾಟೀಲ