ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳ ದಂಡದ ವಿಚಾರವಾಗಿ ಸಂಚಾರಿ ಪೊಲೀಸರು ಹಾಗೂ ವಾಹನ ಸವಾರರೊಂದಿಗೆ ನಡುವೆ ವಾಕ್ಸಮರ ನಡೆಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ದಂಡ ಕಟ್ಟಿಸುವ ವೇಳೆ ಕೆಲ ಟ್ರಾಫಿಕ್ ಪೊಲೀಸರು ಅನುಚಿತ ವರ್ತನೆ ತೋರಿರುವ, ಮತ್ತೊಂದೆಡೆ ಸಾರ್ವಜನಿಕರು ಸಹ ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿರುವ ನಿರ್ದೇಶನಗಳು ಇವೆ.
ಹೀಗಾಗಿಯೇ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅನುಚಿತ ವರ್ತನೆ ಹಾಗೂ ಘರ್ಷಣೆಗಳಿಗೆ ಬ್ರೇಕ್ ಹಾಕಲು ನಗರ ಸಂಚಾರ ಪೊಲೀಸ್ ಇಲಾಖೆಯು ಮುಂದಾಗಿದ್ದು, ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಿದೆ.
ಇದರ ಉಪಯೋಗವೇನು?: ಪೊಲೀಸರ ವಾಹನ ತಪಾಸಣೆ ವೇಳೆ ತಮ್ಮ ತಪ್ಪನ್ನು ಮಾರೆಮಾಚಲು ಹಾಗೂ ಪೊಲೀಸರ ವಿರುದ್ಧ ಕಪ್ಪು ಚುಕ್ಕೆ ಬರುವಂತೆ ಮಾಡಲು ಸಿಬ್ಬಂದಿ ಪ್ರಚೋದಿಸಿ ಅವರಿಂದ ಅನುಚಿತ ವರ್ತನೆ ತೋರುವ ಹಾಗೇ ಮಾಡಿಸಿ ಅದನ್ನು ವಿಡಿಯೋ ಮಾಡಿ ಸಾರ್ವಜನಿಕ ಜಾಲತಾಣಗಳಲ್ಲಿ ಕೆಲ ವಾಹನ ಸವಾರರು ಹರಿಬಿಡುತ್ತಿದ್ದರು.
ಈ ಘಟನೆ ಪೂರ್ವಾಪರ ಮತ್ತು ಸತ್ಯ ತಿಳಿಯದೇ ಸಾರ್ವಜನಿಕರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅದೇ ರೀತಿ ಅಧಿಕಾರ ಪ್ರಭಾವ ಬಳಸಿ ವಾಹನ ಸವಾರರ ಮೇಲೆ ಅಸಭ್ಯವಾಗಿ ವರ್ತಿಸುವುದಲ್ಲದೇ ತೋಳ್ಬಲ ಪ್ರದರ್ಶಿಸಿ ದುವರ್ತನೆ ತೋರಿರುವುದು ನಡೆದಿದೆ. ಕೆಲ ದಿನಗಳ ಹಿಂದೆ ಟೊಯಿಂಗ್ ವಿಚಾರದಲ್ಲಿ ಪೊಲೀಸರು ಹಾಗೂ ವಾಹನ ಸವಾರರ ನಡುವೆ ಸಾಕಷ್ಟು ಬಾರಿ ಗಲಾಟೆಗಳಾಗಿದ್ದ ಪ್ರಸಂಗಗಳೂ ನಡೆದಿದ್ದವು. ಹೀಗಾಗಿ ಪೊಲೀಸರು ಹಾಗೂ ಸವಾರರ ನಡುವೆ ಪಾರದರ್ಶಕ ವ್ಯವಸ್ಥೆ ಜಾರಿ ತರಲು ಬಾಡಿಕ್ಯಾಮರಾ ನೆರವಿಗೆ ಬರಲಿವೆ.
5 ಸಾವಿರ ಕ್ಯಾಮರಾ ವಿತರಣೆ: ಈಗಾಗಲೇ ಕಾನ್ ಸ್ಟೇಬಲ್ನಿಂದ ಹಿಡಿದು ಇನ್ಸ್ಟೆಕ್ಟರ್ವರೆಗೆ ಪ್ರಾಥಮಿಕ ಹಂತದಲ್ಲಿ1,020 ಬಾಡಿವೋರ್ನ್ ಕ್ಯಾಮರಾ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಹೆಚ್ಚುವರಿ 1 ಸಾವಿರ ಕ್ಯಾಮರಾ ವಿತರಿಸಲು ಮುಂದಾಗಿದೆ. ವಿಶೇಷ ಕಾರ್ಯಯೋಜನೆಯಡಿ 2,500 ಕ್ಯಾಮರಾ ವಿತರಿಸಲು ಮುಂದಾಗಿದ್ದು ಒಟ್ಟಾರೆ ತಿಂಗಳಲ್ಲಿ 5 ಸಾವಿರ ಕ್ಯಾಮರಾ ನೀಡಲು ಉದ್ದೇಶಿಸಲಾಗಿದೆ. ಈಗ ಮೊದಲ ಹಂತದಲ್ಲಿ250 ಕ್ಯಾಮರಾಗಳಲ್ಲಿ ಸಿಮ್ ಅಳವಡಿಸಲಾಗಿದೆ. ಆಯಾ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಅನುಗುಣವಾಗಿ 20ರಿಂದ 40 ಕ್ಯಾಮರಾ ನೀಡಲಾಗಿದೆ. ಕರ್ತವ್ಯ ವೇಳೆ ಕಡ್ಡಾಯವಾಗಿ ಹಾಕುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ.
ಬಾಡಿಕ್ಯಾಮರಾ ಧರಿಸುವುದರಿಂದ ಸವಾರರ ಹಾಗೂ ಪೊಲೀಸರ ನಡುವೆ ಸಂಭಾಷಣೆಯ ವಿಡಿಯೋ ಸ್ಟಷ್ಪವಾಗಿ ರೆಕಾರ್ಡ್ ಆಗಲಿದೆ. 50 ಜೆ.ಬಿ. ಸಾಮರ್ಥ್ಯದ ಹಾಗೂ ದೀರ್ಘಕಾಲದವರೆಗೂ ಬ್ಯಾಟರಿವಿರುವ ಕ್ಯಾಮರಾ ಇದಾಗಿದೆ. ಕರ್ತವ್ಯ ವೇಳೆ ಸಿಬ್ಬಂದಿ ಅನುಚಿತ ವರ್ತನೆ ತೋರಿದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ (ಟಿಎಂಸಿ)ನಲ್ಲಿ ಸದಾ ವೀಕ್ಷಿಸಬಹುದಾಗಿದೆ. ಒಂದು ವೇಳೆ, ಸವಾರರು ಕಾನೂನು ಬಾಹಿರವಾಗಿ ವರ್ತಿಸಿದರೆ ಬಾಡಿವೋರ್ನ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಜರುಗಿಸಲು ನೆರವಾಗಲಿದೆ ಎನ್ನುತ್ತಾರೆ ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ.
ಕಡ್ಡಾಯವಾಗಿ ಧರಿಸಲು ತಾಕೀತು: ಕರ್ತವ್ಯ ವೇಳೆ, ಸಾರ್ವಜನಿಕರೊಂದಿಗೆ ಉತ್ತಮ ನಡವಳಿಕೆ ತೋರುವಂತೆ ಪೊಲೀಸ್ ಸಿಬ್ಬಂದಿಗೆ ಹಲವು ರೀತಿಯ ನಿರ್ದೇಶನ ನೀಡಲಾಗಿದೆ. ವಾಹನ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಿರಬೇಕು. ಠಾಣೆಯಿಂದ ಕ್ಯಾಮರಾ ತೆಗೆದಿರಿಸಿಕೊಂಡು ಹೋಗುವಾಗ ನಿಗದಿತ ಡೈರಿಯಲ್ಲಿ ಸಹಿ ಮಾಡಬೇಕು.
ತಪಾಸಣೆ ವೇಳೆ ಅನಗತ್ಯ ಸವಾರರೊಂದಿಗೆ ಮಾತಿನ ಚಕಮಕಿಗೆ ಇಳಿಯಕೂಡದು. ದಂಡ ವಿಚಾರವಾಗಿ ಸಂಭಾಷಣೆ ನಡೆಸುವಾಗ ತಮ್ಮ ಭುಜದ ಮೇಲೆ ಕ್ಯಾಮರಾ ಧರಿಸಿರಬೇಕು. ಸಾರ್ವಜನಿಕರು ಅನುಚಿತ ವರ್ತನೆ ಕಂಡು ಬಂದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ತೇಜೋವಧೆ ಮಾಡುವ ಘಟನೆಗಳಿಗೆ ತಹಬದಿ: ಬಾಡಿವೋರ್ನ್ ಕ್ಯಾಮರಾದಿಂದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಅನಗತ್ಯ ಮಾತುಗಳಿಗೆ ಕಡಿವಾಣ ಬೀಳಲಿದೆ. ಕ್ಯಾಮರಾ ಇರುವುದರಿಂದ ವಾಹನ ಸವಾರರು ತಮ್ಮ ವರ್ತನೆಯಲ್ಲೂ ಸುಧಾರಣೆ ಕಾಣಲಿದೆ. ಕೆಲ ಸವಾರರು ತಮಗೆ ಬೇಕಾದಂತೆ ಮೊಬೈಲ್ನಲ್ಲಿ ವಿಡಿಯೋ ಮಾಡಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತೇಜೊವಧೆ ಮಾಡುವ ಪ್ರಸಂಗಗಳು ಹಲವು ಭಾರಿ ನಡೆದಿವೆ. ಈ ನಿಟ್ಟಿನಲ್ಲಿ ಬಾಡಿವೋರ್ನ್ ಕ್ಯಾಮರಾ ನೆರವಾಗಲಿದೆ ಎಂದು ಟ್ರಾಫಿಕ್ ಸಿಬ್ಬಂದಿಯ ಹೇಳಿದ್ದಾರೆ.