ಬೆಂಗಳೂರು: ಉದ್ಯಾನಗರ ನಿವಾಸಿಗಳ ಜೀವನನಾಡಿ ಅಂದರೆ ಬಿಎಂಟಿಸಿ ಬಸ್. ಮೆಟ್ರೋದಂತಹ ಫಾಸ್ಟ್ ಸರ್ವೀಸ್ ಬಂದರೂ, ಸಹ ಇಂದಿಗೂ ಲಕ್ಷಾಂತರ ಜನರು ಬಿಎಂಟಿಸಿ ಬಸ್ನ್ನೇ ಉಪಯೋಗಿಸುತ್ತಿದ್ದಾರೆ.
ಲಾಕ್ಡೌನ್ ನಿಂದಾಗಿ ಬಿಎಂಟಿಸಿ ಸಂಚಾರಕ್ಕೆ ಕಂಟಕ ಎದುರಾಗಿತ್ತು. ತಿಂಗಳು ಗಟ್ಟಲೆ ಸಾವಿರಾರು ಬಸ್ಸುಗಳು ಡಿಪೋದಲ್ಲೇ ನಿಂತಿದ್ದವು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಂತೂ ಸಿಬ್ಬಂದಿಗೆ ವೇತನ ನೀಡಲು ಆಗದೇ, ಸರ್ಕಾರದ ಅನುದಾನಕ್ಕೆ ಬಿಎಂಟಿಸಿ ಕೈಚಾಚಬೇಕಾಯ್ತು. ಆದ್ರೆ ನಷ್ಟದಿಂದಲೂ ಪಾರಾಗಲೂ ಹಲವಾರು ಯೋಜನೆಗಳಿದ್ದರೂ ಬಿಎಂಟಿಸಿ ನಿರ್ಲಕ್ಷ್ಯ ವಹಿಸಿತ್ತು ಎನ್ನುವುದು ಬೇಸರದ ಸಂಗತಿ.
ಕೋವಿಡ್ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ನಿಗಮ ಗುಜರಿ ಬಸ್ಗಳ ಮಾರಾಟ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದೆ. ಪ್ರತಿ ವರ್ಷ ನಿಗಮದಲ್ಲಿ ನೂರಾರು ಬಸ್ಸುಗಳು ಗುಜರಿ ಸೇರುತ್ತವೆ. ಅದನ್ನ ಸರಿಯಾದ ಸಮಯಕ್ಕೆ ಟೆಂಡರ್ ಕರೆದು ಮಾರಾಟ ಮಾಡಿದರೆ ಆದಾಯ ಬರುತ್ತೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಜರಿ ಬಸ್ಗಳಿಂದ ಆದಾಯ ಬರದೆ ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಸಾರಿಗೆ ನೌಕರರ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬಿಎಂಟಿಸಿ ಸ್ಕ್ರಾಪ್ ಬಸ್ಗಳಿಗೆ ಟೆಂಡರ್ ಕರೆದಿಲ್ಲ. ನಿಗಮದಲ್ಲಿ 9 ಲಕ್ಷ ಕಿಮೀ ಓಡಿದ ನೂರಾರು ಬಸ್ಸುಗಳು ಇವೆ. ಅವುಗಳನ್ನ ಗುಜರಿಯವರಿಗೆ ಮಾರಾಟ ಮಾಡಬೇಕಿತ್ತು. ಆದರೆ ಕೊರೊನಾ ಇದಕ್ಕೂ ಅಡ್ಡಗಾಲು ಹಾಕಿದ್ದು, ಗುಜರಿ ಬಸ್ಗಳು ಮತ್ತು ಅವುಗಳ ಬಿಡಿ ಭಾಗಗಳನ್ನು ಖರೀದಿಸುವವರು ಕಡಿಮೆ ಆಗಿದ್ದಾರೆ. ಇತ್ತ ರಾಜಧಾನಿಯಲ್ಲಿ ಮಳೆಯಿಂದಾಗಿ ಗುಜುರಿ ವಸ್ತುಗಳು ತುಕ್ಕು ಹಿಡಿಯುತ್ತಿವೆ.
ಗುಜರಿ ವಾಹನಳಿಂದ ಇತರೆ ವಾಹನಗಳ ರಿಪೇರಿ ಕೆಲಸಕ್ಕೂ ಅಡ್ಡಿ
ಇತ್ತ ಕೆಲ ಗುಜರಿ ಬಸ್ಸುಗಳನ್ನು ಡಿಪೋಗಳಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ, ಇತರೆ ಬಸ್ಗಳ ರಿಪೇರಿ ಕೆಲಸಕ್ಕೂ ಜಾಗವಿಲ್ಲದೇ ಅಡ್ಡಿಯುಂಟಾಗಿದೆ. ಬಿಎಂಟಿಸಿಯಲ್ಲಿ 6450 ಬಸ್ಗಳಿದ್ದು, ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಬಸ್ಗಳು ಗುಜರಿಗೆ ಸೇರಲಿವೆ. ಕಳೆದ ಸಲ ಟೆಂಡರ್ ಕರೆದಾಗ ಖರೀದಿಗಾಗಿ ಯಾರೊಬ್ಬರು ಬರಲಿಲ್ಲ. ಸರಿಯಾದ ಸಮಯಕ್ಕೆ ಟೆಂಡರ್ ಕರೆದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದರಿಂದ ಹೆಚ್ಚಿನ ಲಾಭಬಾರದೇ ಇದ್ದರೂ, ನಷ್ಟವೂ ಇರುತ್ತಿರಲಿಲ್ಲ ಅಂತ ಸಾರಿಗೆ ನೌಕರರ ಮುಖಂಡ ನಾಗರಾಜ್ ತಿಳಿಸಿದರು.
ಗುಜುರಿ ವಾಹನಗಳ ಮಾರಾಟದ ಜೊತೆಗೆ ಸಂಪೂರ್ಣವಾಗಿ ಎಲ್ಲ ಬಸ್ಗಳನ್ನು ರಸ್ತೆಗಿಳಿಸುವ ಕೆಲಸ ಮಾಡಬೇಕು. ಈ ಹಿಂದೆ ಇದ್ದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ಸಲಹೆ ನೀಡಿದರೂ, ಕ್ಯಾರೆ ಅನ್ನಲಿಲ್ಲ. ಈಗೀರುವ ಹೊಸ ವ್ಯವಸ್ಥಾಪಕ ನಿರ್ದೇಶಕರಿಗೂ ನಮ್ಮ ಸಲಹಾ ಪತ್ರವನ್ನು ನೀಡಲಾಗುವುದು ಎಂದು ನಾಗರಾಜ್ ಅವರು ಹೇಳಿದರು.
ಒಟ್ಟಾರೆ, ನಾನಾ ಕಾರಣಗಳಿಂದ ಗುಜುರಿ ಬಸ್ಸುಗಳು ಮಾರಾಟ ಆಗದೇ ಇರುವುದು ನಿಗಮಕ್ಕೆ ಬಿಸಿ ತುಪ್ಪವಾಗಿ ಪರಿಣಮಿತಿಸಿದೆ. ಮುಳುಗುತ್ತಿರುವ ದೋಣಿಯನ್ನ ದಡ ಸೇರಿಸುವ ಪ್ರಯತ್ನದಂತೆ, ಬಿಎಂಟಿಸಿ ಸ್ಥಿತಿ ಇದ್ದು, ಸದ್ಯ ಅದರ ಚೇತರಿಕೆ ಕಷ್ಟ ಸಾಧ್ಯವಾಗಿದೆ.