ಬೆಂಗಳೂರು : ನಮ್ಮ ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಅಧಿಕಾರಿಗಳು ಭದ್ರತಾ ಕಣ್ಗಾವಲು ಹೆಚ್ಚಿಸಲು ಸಜ್ಜಾಗಿದ್ದಾರೆ.
ಕುಡಿದ ಅಥವಾ ಗಾಂಜಾ ಮತ್ತಿನಲ್ಲಿ ದುಷ್ಕರ್ಮಿಗಳು ಎಸೆದ ಕಲ್ಲುಗಳು ನಮ್ಮ ಮೆಟ್ರೊ ರೈಲುಗಳ ಹೊರ ಭಾಗಗಳಿಗೆ ಬಡಿಯುತ್ತಿವೆ. ಮುಚ್ಚಿದ ಕಿಟಕಿಗಳು ಮತ್ತು ಬಾಗಿಲುಗಳ ಕಾರಣದಿಂದಾಗಿ ಈವರೆಗೆ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಆದರೆ, ಪ್ರಯಾಣಿಕರಲ್ಲಿ ಆತಂಕ, ಭಯ ಇದ್ದೇ ಇರುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಚ್ಚಿದ, ಸಂರಕ್ಷಿತ ಮೆಟ್ರೋ ರೈಲುಗಳು ಮತ್ತು ನಿಲ್ದಾಣಗಳಿಗೆ ದಿನದ 24 ಗಂಟೆ ಭದ್ರತೆ ಕಲ್ಪಿಸಲಾಗಿದೆ. ಆದರೆ, ಹಳಿಗಳನ್ನು ಹಾಕಿರುವ ಕಾಂಪೌಂಡ್ ಗೋಡೆಗಳ ಹೊರಗಿನಿಂದ ರೈಲುಗಳ ಮೇಲೆ ಕಲ್ಲಿನಿಂದ ದಾಳಿಗಳಾಗುತ್ತಿವೆ.
ಅಮಲಿನಲ್ಲಿ ದುಷ್ಕರ್ಮಿಗಳು ಕಲ್ಲು ಎಸೆದು ಕೂಡಲೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಂಡರ್ ಗ್ರೌಂಡ್ ನಿಲ್ದಾಣಗಳು ವಸತಿ ಪ್ರದೇಶಗಳಿಗಿಂತ ಕೆಳಗಿರುವುದರಿಂದ ಸುರಕ್ಷಿತವಾಗಿವೆ ಎಂದು ಅವರು ತಿಳಿಸಿದ್ದಾರೆ.
ಕಿಟಿಕಿಯ ಗಾಜಿನಲ್ಲಿ ಬಿರುಕು : ಪ್ರಮುಖವಾಗಿ ಮಾಗಡಿ ರಸ್ತೆ, ಚಿಕ್ಕಪೇಟೆ, ನ್ಯಾಷನಲ್ ಕಾಲೇಜು, ಸಿಟಿ ರೈಲ್ವೆ ಮತ್ತು ಶ್ರೀರಾಂಪುರದ ಮೆಟ್ರೋ ನಿಲ್ದಾಣಗಳಲ್ಲಿ ಕಲ್ಲು ತೂರಾಟದಿಂದ ರೈಲಿನ ಗಾಜಿನ ಕಿಟಕಿಗಳಲ್ಲಿ ಬಿರುಕು ಬಿಟ್ಟಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಬಲ್ ಗ್ಲೇಸ್ಡ್ ಕಿಟಕಿ ಮತ್ತು ಬಾಗಿಲು : ನಮ್ಮ ಮೆಟ್ರೊ ಕೋಚ್‌ಗಳಿಗೆ ಡಬಲ್ ಗ್ಲೇಸ್ಡ್ ಕಿಟಕಿ ಮತ್ತು ಬಾಗಿಲು ಅಳವಡಿಸಿರುವುದರಿಂದ ಕಲ್ಲುಗಳು ಪ್ರಯಾಣಿಕರಿಗೆ ತಾಗಿಲ್ಲ. ಬಾಹ್ಯ ಗಾಜಿನ ಮೇಲೆ ಬಿರುಕುಗಳು ಉಂಟಾಗಿದ್ದರೂ ಎರಡನೇ ಪದರದ ಮೇಲೆ ಪರಿಣಾಮ ಬೀರಿಲ್ಲ. ಪದರಗಳ ನಡುವೆ ನಿರ್ವಾತವಿದೆ.
ಆದರೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಯಾವುದೇ ಕಲ್ಲು ತೂರಾಟದ ಘಟನೆ ವರದಿಯಾದ ಸಂದರ್ಭದಲ್ಲಿ ಟ್ರಿಪ್ ಪೂರ್ಣಗೊಳಿಸಿ ರೈಲನ್ನು ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆಯುತ್ತೇವೆ. ಗ್ಲಾಸ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ ನಂತರವೇ ನಿರ್ದಿಷ್ಟ ರೈಲನ್ನು ಮತ್ತೆ ಸೇವೆಗೆ ತರಲಾಗುತ್ತದೆ ಎಂದು ವಿವರಿಸಿದ್ದಾರೆ.
ಭದ್ರತಾ ಕಣ್ಗಾವಲು ಹೆಚ್ಚಳ : ಹಾಳಾದ ಗಾಜನ್ನು ಬದಲಾಯಿಸಲು ಸುಮಾರು 10 ಸಾವಿರ ರೂ. ವೆಚ್ಚವಾಗುತ್ತದೆ. ಎಸೆದ ಕಲ್ಲುಗಳು ರೈಲುಗಳಿಗೆ ಬೀಳದಂತೆ ಎತ್ತರದ ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದೇವೆ. ಅಪಾಯಕಾರಿ ತಾಣಗಳೆಂದು ಪರಿಗಣಿಸಲಾದ ಪ್ರದೇಶಗಳಲ್ಲಿ ಭದ್ರತಾ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಕೇವಲ ಮುಸ್ಲಿಂ ಸಮುದಾಯದ ಅಧ್ಯಕ್ಷರ ನೇಮಕ ಪ್ರಶ್ನಿಸಿ ಅರ್ಜಿ: ಸುಪ್ರೀಂ ನೋಟಿಸ್